ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಕ್ಷಯ್ ಕುಮಾರ್ ಬುಧವಾರ ಬೆಳಗ್ಗೆ ಮುಂಬೈನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಅವರ ಬಳಿ ಬಂದ ವಯಸ್ಸಾದ ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಇತ್ಯರ್ಥಗೊಳಿಸಲು ಸ್ಥಳೀಯ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ಅಕ್ಷಯ್ ಕುಮಾರ್ ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮುಂಬೈನ ಜುಹುನಲ್ಲಿ ನಟ ನಿರ್ಮಿಸಿದ ಸಾರ್ವಜನಿಕ ಶೌಚಾಲಯದ ಬಗ್ಗೆ ವೃದ್ಧರು ಮಾತನಾಡಿದ್ದಾರೆ. ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ, ಬೀಚ್‌ನಲ್ಲಿ ಮಲವಿಸರ್ಜನೆ ಮಾಡುವವರ ಬಗ್ಗೆ ಬ್ಲಾಗ್ ಮಾಡಿದ ನಂತರ 2018 ರಲ್ಲಿ ನಟ ಜುಹು ಬೀಚ್‌ನಲ್ಲಿ ಸಾರ್ವಜನಿಕ ಟಾಯ್ಲೆಟ್ ನಿರ್ಮಿಸಿಕೊಟ್ಟಿದ್ದರು.
ವೃದ್ದ ವ್ಯಕ್ತಿ ಅಕ್ಷಯ್ ಅವರ ಬಳಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಿಬ್ಬಂದಿ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ. ಕಳೆದ 3-4 ವರ್ಷಗಳಿಂದ ಹೇಗೆ ಕಳಪೆ ನಿರ್ವಹಣೆ ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿದ್ದು, ಆಗ ಅಕ್ಷಯ್ ಕುಮಾರ್ ಈ ಬಗ್ಗೆ ನಾನು ಗಮನ ಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮತ್ತೊಂದು ಶೌಚಾಲಯವನ್ನು ನಿರ್ಮಿಸಿಕೊಡುವಂತೆ ಅಕ್ಷಯ್‌ಗೆ ಮನವಿ ಮಾಡಿದ್ದು, ಅದಕ್ಕೆ ನಟ ಈಗಾಗಲೇ ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಮತ್ತು ಶೌಚಾಲಯವನ್ನು ನಿರ್ವಹಿಸುವುದು BMC ಯ ಜವಾಬ್ದಾರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ
2018 ರಲ್ಲಿ, ಸಾರ್ವಜನಿಕ ಬಳಕೆಗಾಗಿ ಜುಹು ಮತ್ತು ವರ್ಸೋವಾ ಬೀಚ್‌ಗಳಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಜೈವಿಕ ಶೌಚಾಲಯಗಳನ್ನು ನಿರ್ಮಿಸಲು ಅಕ್ಷಯ್, ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಅವರೊಂದಿಗೆ ಸೇರಿ ಸಹಾಯ ಮಾಡಿದ್ದರು.