ಲಂಡನ್ ನ ಇಲ್ಫೋರ್ಡ್ ನಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಭಾರತೀಯ ಮೂಲದ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯೇ ಪತ್ನಿಯನ್ನು ಕೊಲೆಗೈದು ಬಳಿಕ ಕಾರಿನ ಡಿಕ್ಕಿಯಲ್ಲಿ ಶವವಿಟ್ಟು ಎಸ್ಕೇಪ್ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಮೃತ ಮಹಿಳೆಯನ್ನು ಹರ್ಷಿತಾ ಎಂದು ಗುರುತಿಸಲಾಗಿದೆ. ದೆಹಲಿ ಮೂಲದ ಹರ್ಷಿತಾ ಕಳೆದ ಆಗಸ್ಟ್ ನಲ್ಲಿ ಪಂಕಜ್ ಲಂಬಾ ಎಂಬಾತನ್ನು ವಿವಾಹವಾಗಿದ್ದಳು. ಮದುವೆ ಬಳಿಕ ಯುಕೆಗೆ ತೆರಳಿದ್ದಳು. ಕೆಲ ದಿನಗಳ ಹಿಂದಷ್ಟೇ ನಾರ್ಥಾಂಪ್ಟನ್ ಶೈರ್ ನಲ್ಲಿರುವ ತನ್ನ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ನವೆಂಬರ್ 14ರಂದು ಆಕೆಯ ಮೃತದೇಹ ಕಾರಿನಲ್ಲಿ ಪತ್ತೆಯಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಹರ್ಷಿತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆಕೆಯ ಪತಿ ಪಂಕಜ್ ಲಂಬಾನೆ ಪತ್ನಿಯನ್ನು ಕೊಲೆಗೈದು ಬಳಿಕ ಕಾರಿನ ಡಿಕ್ಕಿಯಲ್ಲಿಟ್ಟಿದ್ದ ಎಂಬುದು ಬಹಿರಂಗವಾಗಿದೆ.
ಕೊಲೆ ಬಳಿಕ 145 ಕಿಮೀ ದೂರ ಇಲ್ಬೋರ್ಡ್ ಗೆ ಆಕೆಯ ಶವ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಆತ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ನ.10ರಂದು ರಾತ್ರಿ ಮನೆಗೆ ಕರೆ ಮಾಡಿದ್ದ ಹರ್ಷಿತಾ, ತಾನು ಪತಿ ಪಂಕಜ್ ಗಾಗಿ ಊಟ ರೆಡಿ ಮಾಡಿ ಕಾಯುತ್ತಿರುವುದಾಗಿ ತಿಳಿಸಿದ್ದಳು. ಅದಾದ ಬಳಿಕ ಎರಡು ದಿನಗಳ ಕಾಲ ಆಕೆಯ ಫೋನ್ ಸ್ವಿಚ್ಡ್ ಆಫ್ ಆಗಿದೆ. ನ.13ರಂದು ಆಕೆಯ ಕುಟುಂಬದವರು ನಾರ್ಥಾಂಪ್ಟನ್ ಶೈರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆ ಬಳಿ ಬಂದು ಪರಿಶೀಲಿಸಿದಾಗ ಪೊಲಿಸರಿಗೆ ಹರ್ಷಿತಾ ಸುಳಿವು ಸಿಕ್ಕಿಲ್ಲ. ತನಿಖೆ ನಡೆಸಿದ ಪೊಲೀಸರಿಗೆ ನ.14ರಂದು ಆಕೆಯ ಶವ ಪತ್ತೆಯಾಗಿದೆ.
ಕೌಟುಂಬಿಕ ದೌರ್ಜನ್ಯದಿಂದ ಹರ್ಷಿತಾ ಕೊಲೆಯಾಗಿದ್ದು, ಕೃತ್ಯದ ಬಳಿಕ ಆಕೆಯ ಪತಿ ಪಂಕಜ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.