ಬೆಳಗಾವಿ: ಕಾರು ಅಡ್ಡಗಟ್ಟಿ 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ದುಷ್ಕರ್ಮಿಗಳು ಪರಾರಿಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಹೈವೆಯಲ್ಲಿ ನ.15ರಂದು ಇಬ್ಬರು ದುಷ್ಕರ್ಮಿಗಳು ಕಾರು ಅಡ್ದಗಟ್ಟಿ ಗನ್ ತೋರಿಸಿ ಹಣದ ಸಮೇತ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾಗಿ ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸೇರಿ ನಾಲ್ವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ಹರಗಾಪುರ ಬಳಿ ಅಡ್ಡಗಟ್ಟಿ 75 ಲಕ್ಷ ದರೋಡೆ ಮಾಡಿದ್ದಾಗಿ ಮಹಾರಾಷ್ಟ್ರದ ಸೂರಜ್ ಹೊನಮಾನೆ ಎಂಬುವವರು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ನೇರ್ಲಿ ಬಳಿ ಕಾರು ಪತ್ತೆಯಾಗಿದೆ. ಕಾರಿನಲ್ಲಿದ್ದ 75 ಲಕ್ಷ ಹಣ ದರೋಡೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಕಾರಿನಲ್ಲಿ ಪತ್ತೆಯಾಗಿದ್ದು ಬರೋಬ್ಬರಿ 1.01 ಕೋಟಿ ಹಣ. ತನಿಖೆ ಚುರುಕುಗೊಳಿಸಿದ ಪೊಲೀಸರು ದೂರುದಾರ ಸೂರಜ್ ಅವರನ್ನು ವಿಚಾರಿಸಿದಾಗ ವ್ಯಾಪಾರಿಯೊಬ್ಬರು ಕೊಟ್ಟಿದ್ದ ಹಣವನ್ನು ತೆಗೆದುಕೊಂಡು ಬರುವಾಗ ಘಟನೆ ನಡೆದಿತ್ತು. 75 ಲಕ್ಷ ಹಣವಿರಬಹುದು ಎಂದು ಹಾಗೆ ದೂರು ನೀಡಿದ್ದಾಗಿ ಹೇಳಿಕೆ ನೀಡಿದ್ದರು.
ದೂರುದಾರರ ಮೇಲೆ ಇನ್ನಷ್ಟು ಅನುಮಾನಗೊಂಡ ಪೊಲೀಸರು, ದೂರುದಾರ ಸೂರಜ್, ಕಾರು ಚಾಲಕ ಆರೋಪಿ ಶೇಖ್, ಅಜಯ್ ಸರಗಾರ ಸೇರಿ ನಾಲ್ವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ. ಕಾರಿನ ಹ್ಯಾಂಡ್ ಬ್ರೇಕ್ ಇರುವ ಜಾಗದ ಮೂಲ ವಿನ್ಯಾಸ ಬದಲಿಸಿ ಅದರಲ್ಲಿಯೇ ಹಣ ಸಾಗಿಸಲಾಗುತ್ತಿತ್ತು. ಒಂದು ಕೋಟಿಗೂ ಅಧಿಕ ಹಣ ಪತ್ತೆಯಾಗಿರುವುದರಿಂದ ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ. ಪ್ರಕರಣದ ತನಿಖೆಗೆ ಮೂರು ತಂಡ ರಚಿಸಲಾಗಿದೆ ಎಂದು ವಿವರಿಸಿದ್ದಾರೆ.