ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಕಾಮಗಾರಿಗಳ ಗುತ್ತಿಗೆಗೆ ಸಂಬಂಧಿಸಿದಂತೆ ಕೇಳಿ ಬಂದಿದ್ದ 40% ಕಮಿಷನ್ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಲೋಕಾಯುಕ್ತ ಪೊಲೀಸ್ ವಿಭಾಗ ತನಿಖಾ ವರದಿ ಸಲ್ಲಿಸಿದೆ.
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮಾಡಿದ್ದ ಆರೋಪದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಬಿಬಿಎಂಪಿ ಗುತ್ತಿಗೆ ಪಡೆಯಲು ಮಧ್ಯವರ್ತಿಗಳು, ಪಾಲಿಕೆ ಅಧಿಕಾರಿಗಳಿಗೆ ಶೇಕಡ 40ರಷ್ಟು ಕಮಿಷನ್ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಕಂಡುಬಂದಿಲ್ಲ. ಇದೊಂದು ಆಧಾರ ರಹಿತ ಆರೋಪವಾಗಿದೆ ಎಂದು ತನಿಖಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಅಂತಿಮ ವರದಿಗೆ ಒಪ್ಪಿ ದೂರು ಮುಕ್ತಾಯಗೊಳಿಸಲು ಅನುಮತಿ ನೀಡಬೇಕೆಂದು ಲೋಕಾಯುಕ್ತರಿಗೆ ಜುಲೈ 24ರಂದು ವರದಿ ನೀಡಲಾಗಿದ್ದು, ತಡವಾಗಿ ಬಹಿರಂಗವಾಗಿದೆ.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಅಂಬಿಕಾಪತಿಯವರು ಮೈದಾನ ಕಾಮಗಾರಿ ಗುತ್ತಿಗೆ ಸಲುವಾಗಿ ಪಾಲಿಕೆ ಪೂರ್ವ ವಿಭಾಗದ ಅಧಿಕಾರಿಗಳು, ಮಧ್ಯವರ್ತಿಗಳಿಗೆ 5 ಕೋಟಿ ರೂಪಾಯಿ ಕಮಿಷನ್ ನೀಡಿದ ಆರೋಪ ಮಾಡಿದ್ದರು. ಆದರೆ, ಈ ಆರೋಪದ ಸತ್ಯಾಸತ್ಯತೆ ದೃಢವಾಗಿಲ್ಲ. ಈ ನಡುವೆ ಅಂಬಿಕಾಪತಿ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ, 2022 ಮತ್ತು ಅದರ ಹಿಂದಿನ ಐದು ವರ್ಷಗಳಲ್ಲಿ ಅಂಬಿಕಾಪತಿಯವರು ಯಾವುದೇ ಕಾಮಗಾರಿಯ ಗುತ್ತಿಗೆ ಪಡೆದಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿಲ್ಲ. ಹೀಗಾಗಿ ಅಂಬಿಕಾಪತಿ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಲೋಕಾಯುಕ್ತ ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆದ ಆರೋಪ ಭಾರಿ ಚರ್ಚೆಗೆ ಕಾರಣವಾಗಿತ್ತು. ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಪ್ರಬಲ ಅಸ್ತ್ರವನ್ನಾಗಿ ಇದನ್ನು ಬಳಸಿಕೊಂಡಿತ್ತು.