ಕೌನ್ ಬನೇಗಾ ಕರೋಡ್ಪತಿ (ಕೆಬಿಸಿ) ಸೀಸನ್ 16 ರ ಇತ್ತೀಚಿನ ಸಂಚಿಕೆಯಲ್ಲಿ ಪಂಜಾಬ್‌ನ ಭಟಿಂಡಾದ 15 ವರ್ಷದ ವಿದ್ಯಾರ್ಥಿ ಆರ್ಯನ್ ಹಂಡಾ ರೋಲ್ ಓವರ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ, ಹಾಟ್ ಸೀಟ್‌ನಲ್ಲಿ ಕುಳಿತ ಆರ್ಯನ್ ಅವರ ಬುದ್ಧಿವಂತಿಕೆ, ಜ್ಞಾನ ಮತ್ತು ಪ್ರೀತಿಯ ವ್ಯಕ್ತಿತ್ವ ವೀಕ್ಷಕರನ್ನು ಆಕರ್ಷಿಸಿದೆ.
10,000 ರೂಪಾಯಿಯ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಆರ್ಯನ್ ‘ವೀಕ್ಷಕರ’ ಲೈಫ್ ಲೈನ್ ಅನ್ನು ಬಳಸುವುದರೊಂದಿಗೆ ಸಂಚಿಕೆ ಪ್ರಾರಂಭವಾಗಿದ್ದು, ಸಚಿನ್ ತೆಂಡೂಲ್ಕರ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕಗಳಲ್ಲಿ ಎರಡನೇ ಸ್ಥಾನದಲ್ಲಿರುವವರು ಯಾರು ಎಂದು ಪ್ರಶ್ನೆ ಕೇಳಲಾಯಿತು. ಆರ್ಯನ್ ಆತ್ಮವಿಶ್ವಾಸದಿಂದ C ಆಯ್ಕೆಯನ್ನು ಆರಿಸಿಕೊಂಡರು: ಇದರಿಂದಾಗಿ ಮೊದಲ ಮಹತ್ವದ ಗೆಲುವು ಸಾಧಿಸಿದರು.
ಬಿಗ್ ಬಿ ಜೊತೆಗಿನ ಸಂಭಾಷಣೆಯ ಸಮಯದಲ್ಲಿ ಆರ್ಯನ್, ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರಿಂದ ಪ್ರೇರಿತರಾಗಿ ಏರೋಸ್ಪೇಸ್ ಇಂಜಿನಿಯರ್ ಆಗುವ ತಮ್ಮ ಆಕಾಂಕ್ಷೆಯನ್ನು ಬಹಿರಂಗಪಡಿಸಿದರು.
ಬಾಹ್ಯಾಕಾಶ ವಿಜ್ಞಾನದ ಬಗ್ಗೆ ತಮ್ಮ ಆಕರ್ಷಣೆಯನ್ನು ಹಂಚಿಕೊಂಡ ಆರ್ಯನ್, “ಚಂದ್ರಯಾನದ ಉಡಾವಣೆಯ ನಂತರ, ನಾನು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡೆ ಮತ್ತು ಅದರ ಬಗ್ಗೆ ಸಂಶೋಧನೆ ಮಾಡಲು ಪ್ರಾರಂಭಿಸಿದೆ” ಎಂದರು. ಇದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ ಅಮಿತಾಬ್ ಬಚ್ಚನ್ “ನಿಮ್ಮ ವಯಸ್ಸಿನಲ್ಲಿ, ನನಗೆ ಪೈಜಾಮಾದ ದಾರ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ” ಎಂದರು.
ಬಿಗ್ ಬಿ ಅವರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತ 1 ಕೋಟಿ ರೂ. ವರೆಗೆ ಆರ್ಯನ್ ಬಂದಿದ್ದು, ಆದರೆ ಕೋಟಿ ರೂಪಾಯಿ ಪ್ರಶ್ನೆಗೆ ಉತ್ತರ ಕಷ್ಟವೆನಿಸಿದಾಗ 50 ಲಕ್ಷ ರೂಪಾಯಿಗಳೊಂದಿಗೆ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದರು.
1 ಕೋಟಿಯ ಪ್ರಶ್ನೆಗೆ ಉತ್ತರಿಸದಿದ್ದರೂ, ಆರ್ಯನ್ ಅವರ ಆಟದ ಸಾಮರ್ಥ್ಯವನ್ನು ಅಮಿತಾಬ್ ಬಚ್ಚನ್ ಶ್ಲಾಘಿಸಿ ಅವರ ಸಮತೋಲನ ಮತ್ತು ಬುದ್ಧಿವಂತಿಕೆಯನ್ನು ಮೆಚ್ಚಿದರು. ಯುವ ಸ್ಪರ್ಧಿಯು ತನ್ನ ಜ್ಞಾನಕ್ಕಾಗಿ ಮಾತ್ರವಲ್ಲದೆ, ನಮ್ರತೆ ಮತ್ತು ಮೋಡಿಗಾಗಿ ಆತಿಥೇಯರು, ಪ್ರೇಕ್ಷಕರು ಮತ್ತು ವೀಕ್ಷಕರ ಮೇಲೆ ಅಳಿಸಲಾಗದ ಪ್ರಭಾವ ಬೀರಿದರು.