ಅಜ್ಮೀರ್‌ನ ನಾಸಿರಾಬಾದ್‌ನ ಹನ್ನೊಂದನೇ ತರಗತಿ ವಿದ್ಯಾರ್ಥಿಯೊಬ್ಬ ಕೇವಲ ಮೂರು ತಿಂಗಳಲ್ಲಿ ಇಬ್ಬರು ಮಹಿಳೆಯರಿಗೆ 42 ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ಪೊಲೀಸರ ಪ್ರಕಾರ, ಕಾಶಿಫ್ ಮಿರ್ಜಾ ಎಂದು ಗುರುತಿಸಲಾದ ಆರೋಪಿ ಹೂಡಿಕೆ ಯೋಜನೆಗಳನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದ, ಅಲ್ಲದೇ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯದ ಭರವಸೆಯೊಂದಿಗೆ ಜನರನ್ನು ಯಾಮಾರಿಸುತ್ತಿದ್ದ.
ಪೊಲೀಸರ ವಿಚಾರಣೆ ವೇಳೆ, ಮಿರ್ಜಾನ ಐಷಾರಾಮಿ ಜೀವನಶೈಲಿ ಬೆಳಕಿಗೆ ಬಂದಿದ್ದು, ಈತ ಐಷಾರಾಮಿ ಕಾರಿನಲ್ಲಿ ಶಾಲೆಗೆ ಹೋಗುತ್ತಿದ್ದ ಎನ್ನಲಾಗಿದೆ, ಇದು ಅವರ ಶಿಕ್ಷಕರಿಗೂ ಅಚ್ಚರಿ ಉಂಟು ಮಾಡಿತ್ತು. ತನ್ನ ವಂಚನಾ ಕಾರ್ಯದಿಂದಲೇ ಈತ 80 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದ, ಅದರಲ್ಲಿ 20 ಲಕ್ಷ ರೂ.ಗಳನ್ನು ತನ್ನ ಅದ್ದೂರಿ ಜೀವನ ಶೈಲಿಗಾಗಿ ಖರ್ಚು ಮಾಡಿದ್ದ.
ಪೊಲೀಸರು, ಆರೋಪಿಯಿಂದ ನೋಟು ಎಣಿಸುವ ಯಂತ್ರ, ಐಷಾರಾಮಿ ಕಾರು ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ. ಅಜ್ಮೀರ್ ಸೈಬರ್ ಠಾಣೆ ಪೊಲೀಸರು ಸೋಮವಾರ ಆತನನ್ನು ಎರಡು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಸಂತ್ರಸ್ತರಾದ ಉಷಾ ರಾಥೋಡ್ ಮತ್ತು ಮಾಲಾ ಪಠಾರಿಯಾ, ಮಾರ್ಚ್ 21 ರಂದು ನಾಸಿರಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಮಿರ್ಜಾ ವಿರುದ್ಧ ದೂರು ದಾಖಲಿಸಿದ್ದರು ಎಂದು ಸಬ್ ಇನ್ಸ್‌ಪೆಕ್ಟರ್ ಮನೀಶ್ ಚರಣ್ ಹೇಳಿದ್ದಾರೆ. ಮಿರ್ಜಾ ಐದು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಲ್ಲದೇ ತನ್ನ ಇಬ್ಬರು ಸ್ನೇಹಿತರ ಜೊತೆಗೆ 2023 ರ ಅಕ್ಟೋಬರ್‌ನಲ್ಲಿ ಲಕ್ಷ್ಮಿ ಇನ್ವೆಸ್ಟ್‌ಮೆಂಟ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದ ಎಂಬ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ.
28 ದಿನಗಳಲ್ಲಿ ಹಣವನ್ನು ದ್ವಿಗುಣಗೊಳಿಸುವ ಭರವಸೆಯೊಂದಿಗೆ ರೂ. 4,000 ಆರಂಭಿಕ ಹೂಡಿಕೆಯೊಂದಿಗೆ ಯೋಜನೆಯು ಪ್ರಾರಂಭವಾಗಿದ್ದು, ನಂಬಿಕೆ ಗಳಿಸಲು, ಆರಂಭದಲ್ಲಿ ಹೂಡಿಕೆದಾರರಿಗೆ ತಾನು ನೀಡಿದ್ದ ಭರವಸೆಯಂತೆ ಹಣ ನೀಡುತ್ತಿದ್ದ. ಹಗರಣದಲ್ಲಿ ಆರೋಪಿ ತನ್ನ ದೂರದ ಸಂಬಂಧಿಗಳನ್ನೂ ಸಹ ಬಲೆಗೆ ಬೀಳಿಸಿದ್ದಾನೆ.
ಮಿರ್ಜಾ ತನ್ನ ಐಷಾರಾಮಿ ಜೀವನಶೈಲಿಗಾಗಿ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಬ್ರ್ಯಾಂಡೆಡ್ ಬಟ್ಟೆ ಖರೀದಿ ಹಾಗೂ ಅಜ್ಮೀರ್ ಮತ್ತು ಪುಷ್ಕರ್‌ನ ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯ ತಂದೆ ಪರ್ವೇಜ್ ಮಿರ್ಜಾ, ತನ್ನ ಮಗನ ಚಟುವಟಿಕೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದು, ತನ್ನ ಮಗ ಸಾಮಾಜಿಕ ಮಾಧ್ಯಮ ರೀಲ್‌ಗಳನ್ನು ರಚಿಸುವಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾನೆ ಎಂದು ಅವರು ನಂಬಿದ್ದರು ಎನ್ನಲಾಗಿದೆ.
ವಿಚಾರಣೆ ವೇಳೆ ಕಾಶಿಫ್ ಮಿರ್ಜಾ ತನ್ನ ಮೋಸದ ಹೂಡಿಕೆ ಯೋಜನೆಯ ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಆರಂಭದಲ್ಲಿ ರೂ.3,999 ಹೂಡಿಕೆಯನ್ನು ನಾಲ್ಕು ವಾರಗಳ ಅವಧಿಗೆ ಕೋರಲಾಗಿದ್ದು, ರೂ.6,199 ಮೆಚ್ಯೂರಿಟಿ ಮೊತ್ತದೊಂದಿಗೆ ರೂ.2,200 ಲಾಭದ ಭರವಸೆ ನೀಡಲಾಗಿತ್ತು ಎಂದು ತಿಳಿಸಿದ್ದಾನೆ.