ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಕಿಟ್ ಖರೀದಿ ಹಗರಣಕ್ಕೆ ಸಂಬಂದಿಸಿದಂತೆ ನಿವೃತ್ತ ನ್ಯಾ.ಕುನ್ಹಾ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ ಹಾಗೂ ಹಗರಣದ ತನಿಖೆಗೆ ಎಸ್ಐಟಿ ರಚನೆಗೆ ಸಚಿವ ಸಂಪುಟ ಅನುಮೋದನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಹುಚ್ಚಾಸ್ಪತ್ರೆಯಲ್ಲಿರಬೇಕಾದವರು ಕ್ಯಾಬಿನೆಟ್ ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅರಗ ಜ್ಞಾನೇಂದ್ರ ಅತ್ಯಂತ ಲಘುವಾಗಿ ಮತನಾಡುತ್ತಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಮೊದಲು ಅವರ ಮೇಲಿರುವ ಆರೋಪಗಳಿಗೆ ಅರಗ ಜ್ಞಾನೇಂದ್ರ ಉತ್ತರ ನೀಡಲಿ. ಉತ್ತರ ಕೊಡಲು ಆಗದಿದ್ದಾಗ ಈ ರೀತಿ ಹೇಳಿಕೆಗಳು ಬರುತ್ತವೆ. ಆಯೋಗದ ವರದಿಯಲ್ಲಿ ಹಿಂದಿನ ಆರೋಗ್ಯ ಸಚಿವರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖವಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಮಕ್ಕೆ ಉಲ್ಲೇಖಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆಯೂ ಸ್ಪಷ್ಟ ಉಲ್ಲೇಖವಿದೆ. ಈ ವಿಚಾರವನ್ನು ನಾವು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು.