ಬೆಂಗಳೂರು: ಮಧ್ಯಂತರ ಜಾಮೀನು ಮೂಲಕ ಬಿಡುಗಡೆಯಾಗಿರುವ ಕೊಲೆ ಆರೋಪಿ ನಟ ದರ್ಶನ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ದರ್ಶನ್ ಗೆ ನೀಡಿರುವ ಮಧ್ಯಂತರ ಜಾಮೀನು ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರಿಗೆ ಸರ್ಕಾರ ಅನುಮತಿ ನೀಡಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಈ ಬಗ್ಗೆ ಮಾಹಿತಿ ನೀಡಿದ್ದು, ದರ್ಶನ್ ಮಧ್ಯಂತರ ಜಾಮೀನೀನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪೊಲೀಸರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಳ್ಳಾರಿ ಜೈಲು ಪಾಲಾಗಿದ್ದ ನಟ ದರ್ಶನ್ ಬೆನ್ನುನೋವು ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜಾಮೀನು ಪಡೆದಿದ್ದಾರೆ. ಹೈಕೋರ್ಟ್ 6 ವಾರಗಳ ಕಾಲ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರಿಗೆ ಅನುಮತಿ ನೀಡಿದೆ.