ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ(ಜಾರಿ ನಿರ್ದೇಶನಾಲಾಯ) ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.
ವಾಲ್ಮೀಕಿ ನಿಗಮದ ಹಗರಣ ಪ್ರಕರಣ ಸಂಬಂಧ ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧದ ಕೇಸ್ ರದ್ದುಗೊಳಿಸುವಂತೆ ಇಡಿ ಅಧಿಕಾರಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ದೂರು ದಾಖಲಿಸಿದ್ದ ಅಧಿಕಾರಿ ಕೇಸ್ ಹಿಂಪಡೆದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಆದೇಶ ನೀಡಿ ಪ್ರಕರಣ ಇತ್ಯರ್ಥ ಗೊಳಿಸಿದೆ.
ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಮಾಜಕಲ್ಯಾಣ ಇಲಾಖೆ ನಿರ್ದೇಶಕ ಕಲ್ಲೇಶ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಡಿ ಅಧಿಕಾರಿಗಳಾದ ಮನೋಜ್ ಮಿತ್ತಲ್ ಹಾಗೂ ಮುರಳಿ ಕಣ್ಣನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಕಲ್ಲೇಶ್ ತಾವೇ ಕೇಸ್ ಹಿಂಪಡೆದಿದ್ದರು. ಇದೀಗ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.