ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದಾಳಿಕೋರರು ಗುರುವಾರದಂದು 45 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ನಡೆದಿದ್ದು, ಇಡೀ ದೃಶ್ಯಾವಳಿ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ವೀಡಿಯೊದಲ್ಲಿ, ಹತ್ಯೆಗೀಡಾದ ವ್ಯಕ್ತಿ ಕಾಲೋನಿ ಸದಸ್ಯರೊಂದಿಗೆ ಮಾತನಾಡುತ್ತಿದ್ದಾಗ, ಬೈಕ್ ನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಲು ಆರಂಭಿಸಿದ್ದಾರೆ. ಇದರ ಪರಿಣಾಮ ಆತ ನೆಲದ ಮೇಲೆ ಬಿದ್ದಿದ್ದು, ಹಂತಕರು ಪರಾರಿಯಾಗಿದ್ದಾರೆ.
45 ವರ್ಷ ವಯಸ್ಸಿನ ಸೋನಿ ಸರ್ದಾರ್ ಎಂದು ಕರೆಯಲ್ಪಡುವ ಜಸ್ವಂತ್ ಸಿಂಗ್ ಹತ್ಯೆಗೀಡಾವನಾಗಿದ್ದು, 2016ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈತ, ಕೇವಲ 15 ದಿನಗಳ ಹಿಂದಷ್ಟೇ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ.
ದಾಬ್ರಾದ ಗೋಪಾಲ್ ಬಾಗ್ ಸಿಟಿಯಲ್ಲಿ ವಾಸವಾಗಿದ್ದ ಜಸ್ವಂತ್, ಅಕ್ಟೋಬರ್ 28 ರಂದು 15 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. ಊಟದ ನಂತರ, ಆತ ನಿಯಮಿತವಾಗಿ ವಾಕ್ ಮಾಡುತ್ತಿದ್ದು, ಈ ವೇಳೆ ಕೆಲವರೊಂದಿಗೆ ಮಾತನಾಡುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮೂರು ಗುಂಡು ಹಾರಿಸಿ ಸ್ಥಳದಿಂದ ಪಲಾಯನ ಮಾಡಿದ್ದಾರೆ.
ಗುಂಡಿನ ದಾಳಿ ಸ್ಥಳೀಯ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದ್ದು, ಕುಟುಂಬ ಸದಸ್ಯರು ತಕ್ಷಣ ಜಸ್ವಂತ್ ಅವರನ್ನು ಗ್ವಾಲಿಯರ್‌ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಗೋಪಾಲ್ ಬಾಗ್ ನಗರವು ಪ್ರವೇಶದ್ವಾರದಲ್ಲಿ ಗಾರ್ಡ್ ಪೋಸ್ಟ್ ಹೊಂದಿರುವ ಗೇಟ್ ಕಾಲೋನಿಯಾಗಿದ್ದು, ಆದರೆ ಸೆಕ್ಯೂರಿಟಿ ಗಾರ್ಡ್ ಕಳೆದೆರಡು ದಿನಗಳಿಂದ ರಜೆ ಹಾಕಿದ್ದರಿಂದ ಗೇಟ್ ತೆರೆದುಕೊಂಡಿತ್ತು. ಇದು ದಾಳಿಕೋರರಿಗೆ ಅಪರಾಧ ಎಸಗಲು ಮತ್ತು ಅಡೆತಡೆಯಿಲ್ಲದೆ ತಪ್ಪಿಸಿಕೊಳ್ಳಲು ಸುಲಭವಾಯಿತು.
#WATCH | MP: Released Prisoner Fatally Shot By Two Attackers On Motorcycle In Gwalior#MadhyaPradesh #gwalior #MPNews pic.twitter.com/m8avkf3kN1
— Free Press Madhya Pradesh (@FreePressMP) November 8, 2024