alex Certify ಮುಂದಿನ ಮೂರೂವರೆ ವರ್ಷ ನಾನೇ ಈ ರಾಜ್ಯದ ಮುಖ್ಯಮಂತ್ರಿ : CM ಸಿದ್ದರಾಮಯ್ಯ ಘೋಷಣೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ಮೂರೂವರೆ ವರ್ಷ ನಾನೇ ಈ ರಾಜ್ಯದ ಮುಖ್ಯಮಂತ್ರಿ : CM ಸಿದ್ದರಾಮಯ್ಯ ಘೋಷಣೆ.!

ಬೆಂಗಳೂರು : ಮುಂದಿನ ಮೂರೂವರೆ ವರ್ಷ ನಾನೇ ಈ ರಾಜ್ಯದ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಸಂಡೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ ನಂತರ ಮಾತನಾಡಿದರು. ಮುಂದಿನ ಮೂರೂವರೆ ವರ್ಷ ನಾನೇ ಈ ರಾಜ್ಯದ ಮುಖ್ಯಮಂತ್ರಿ . ರಾಜ್ಯ ಸರ್ಕಾರ ಸುಭದ್ರವಾಗಿರಲಿದೆ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಎಲ್ಲಾ ಹಣಕ್ಕೂ ಕೊಕ್ಕೆ ಹಾಕುತ್ತಾ ರಾಜ್ಯದ ಗ್ಯಾರಂಟಿಗಳನ್ನು ನಿಲ್ಲಿಸಲೇಬೇಕು ಎನ್ನುವ ರೀತಿಯಲ್ಲಿ ಪ್ರಧಾನಿ ಮೋದಿ ಅವರು ತೊಂದರೆ ಕೊಟ್ಟರು. ರಾಜ್ಯದಲ್ಲಿ ಭೀಕರ ಬರಗಾಲ ಇದ್ದಾಗಲೂ ರಾಜ್ಯದ ಪಾಲಿನ ಬರ ಪರಿಹಾರದ ಹಣ ಕೊಡಲಿಲ್ಲ. ನಾವು ಸುಪ್ರೀಂಕೋರ್ಟ್ ಗೆ ಹೋಗಿ ಬರ ಪರಿಹಾರ ಪಡೆದೆವು. ಕೇಂದ್ರ ಬಿಜೆಪಿ ಸರ್ಕಾರ ಎಷ್ಟೇ ಕಷ್ಟ ಕೊಟ್ಟರೂ ನಾವು ಗ್ಯಾರಂಟಿಗಳನ್ನು ನಿಲ್ಲಿಸಲಿಲ್ಲ. ಮುಂದೆಯೂ ನಿಲ್ಲಿಸುವುದಿಲ್ಲ.

ನಾವು ನುಡಿದಂತೆ ನಡೆದು ನಿಮ್ಮ ಎದುರಿಗೆ ನಿಂತು ಮತ ಕೇಳುತ್ತಿದ್ದೇವೆ. ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಅನ್ನಪೂರ್ಣ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವುದೇ ನನ್ನ ಕೆಲಸಕ್ಕೆ ಕೊಡುವ ಕೂಲಿ.ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲೂ ರಾಜ್ಯದ ಅಭಿವೃದ್ಧಿ ಆಗಲಿಲ್ಲ. ಈ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಡೂರಿನ ಪ್ರಗತಿಗೆ ಒಂದೇ ಒಂದು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ ಉದಾಹರಣೆಯಾದರೂ ಇದೆಯಾ? ಆದರೆ ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದೆ.

ಮೋದಿ ಅವರು ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ, ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಹಸಿ ಹಸಿ ಸುಳ್ಳು ಹೇಳಿದರು. ಐದೂ ಗ್ಯಾರಂಟಿಗಳಿಗೆ ₹56 ಸಾವಿರ ಕೋಟಿ ತೆಗೆದಿರಿಸಿರುವುದು ಮಾತ್ರವಲ್ಲದೆ ಇತರೆ ಅಭಿವೃದ್ಧಿ ಕಾರ್ಯಗಳಿಗೂ 1.20 ಲಕ್ಷ ಕೋಟಿ ತೆಗೆದಿರಿಸಿದ್ದೀವಿ. ರಾಜ್ಯದ ಆರ್ಥಿಕತೆ ಈಗಲೂ ಪ್ರಗತಿಯಾಗುತ್ತಲೇ ಇದೆ.

ಕೇಂದ್ರದಲ್ಲಿ 11 ವರ್ಷಗಳಿಂದ ಮೋದಿ ಅವರು ಪ್ರಧಾನಿ ಆಗಿದ್ದಾರೆ. ಇವತ್ತಿನವರೆಗೂ ಅವರು ಕೊಟ್ಟ ಭರವಸೆ ಈಡೇರಿಸಲಿಲ್ಲ. ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಎಂದು ಭಾಷಣದಲ್ಲಿ ಹೇಳಿದ್ದರು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಕಡಿಮೆಯಾದರೂ ಇಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಕಡಿಮೆ ಆಗಲಿಲ್ಲ. ರಸಗೊಬ್ಬರ, ಕಾಳು-ಬೇಳೆ ಸೇರಿ ಎಲ್ಲದರ ಬೆಲೆ ಗಗನಕ್ಕೇರಿತು. ವಿದೇಶದಿಂದ ಕಪ್ಪು ಹಣ ತರಲಿಲ್ಲ, ಜನರ ಖಾತೆಗೆ 15 ಲಕ್ಷ ಹಾಕಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಹೀಗೆ ನರೇಂದ್ರ ಮೋದಿ ಅವರ ಸಾಲು ಸಾಲು ಸುಳ್ಳುಗಳು ಈಗ ಜನರೆದುರು ಬಯಲಾಗಿವೆ.

ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಬಳ್ಳಾರಿಗೆ ಪಾದಯಾತ್ರೆ ಬಂದಿದ್ದೆ. ಆದರೆ ಪ್ರೋಟೋಕಾಲ್ಗೆ ವಿರುದ್ಧವಾಗಿ ಒಬ್ಬೇ ಒಬ್ಬ ಅಧಿಕಾರಿ ನನ್ನ ಎದುರಿಗೆ ಬರದಂತೆ ರೆಡ್ಡಿ ಭಯ ಸೃಷ್ಟಿಸಿದ್ದರು. ನನ್ನೊಬ್ಬನಿಗೆ ಮಾತ್ರವಲ್ಲ, ಬಿ.ಎಸ್.ಯಡಿಯೂರಪ್ಪ ಅವರು ಬಳ್ಳಾರಿ ಏರ್ ಪೋರ್ಟ್ ಗೆ ಬಂದಾಗಲೂ ಒಬ್ಬೇ ಒಬ್ಬ ಅಧಿಕಾರಿ ಅವರನ್ನು ಕಾಣಲು ಹೋಗದಂತೆ ರೆಡ್ಡಿ ಭಯ ಹುಟ್ಟಿಸಿದ್ದರು. ಬಳ್ಳಾರಿ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ನಾನು ವಿರೋಧ ಪಕ್ಷದ ನಾಯಕನಾಗಿ ಭೇಟಿ ನೀಡಲು ಅವಕಾಶ ಸಿಗದಂತೆ ಸಿನಿಮೀಯ ರೀತಿಯಲ್ಲಿ ಅಡ್ಡಿ ಪಡಿಸಿದ್ದರು. ಇದನ್ನು ನಾನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಆಗಲೂ ಬಳ್ಳಾರಿಗೆ ಕಾಲಿಟ್ಟು ನೋಡಿ ಎನ್ನುವ ಬೆದರಿಕೆಯೊಡ್ಡಿದ್ದರು. ಈ ಬೆದರಿಕೆಗೆ ಬಗ್ಗದೆ ಸವಾಲಾಗಿ ಸ್ವೀಕರಿಸಿ ಬೆಂಗಳೂರಿನಿಂದ ಪಾದಯಾತ್ರೆಯಲ್ಲಿ ಬಂದೆ. ಅಲ್ಲಿಂದ ಜನಾರ್ಧನ ರೆಡ್ಡಿಯ ಅವನತಿ ಶುರುವಾಯಿತು. ಬಳ್ಳಾರಿ ಮತ್ತೆ ಅಂತದ್ದೆ ಭಯಗ್ರಸ್ಥ ಸ್ಥಿತಿಗೆ ಹೋಗಬಾರದು. ಮತ್ತೆ ಬಳ್ಳಾರಿ ರಿಪಬ್ಲಿಕ್ ಆಗಬಾರದು. ಬಳ್ಳಾರಿಯ ಘನತೆ, ಗೌರವಕ್ಕೆ ಧಕ್ಕೆ ತರುವವರನ್ನು ಬೆಂಬಲಿಸದೆ ಬಳ್ಳಾರಿಯ ಘನತೆ ಹೆಚ್ಚಿಸುವ ಈ.ತುಕಾರಾಮ್ ದಂಪತಿಯನ್ನು ಬೆಂಬಲಿಸಿ ಗೆಲ್ಲಿಸಿ ಎಂದರು.
ಈಗ ಉಪಚುನಾವಣೆ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಭೇರಿ ಬಾರಿಸುತ್ತಾರೆ. ನಾನು ಮೂರೂ ಕ್ಷೇತ್ರಗಳಲ್ಲಿ ಓಡಾಡಿ ಬಂದಿದ್ದೇನೆ. ನನಗೆ ಆತ್ಮವಿಶ್ವಾಸ ಇದೆ. ಮೂರೂ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಕೃಷ್ಣಾನಗರ ಒಂದರಲ್ಲೇ ಕಾಂಗ್ರೆಸ್ಸಿಗೆ ನಾಲ್ಕು ಸಾವಿರ ಮತಗಳು ಲೀಡ್ ಬರಬೇಕು. ಇದು ಸಂತೋಷ್ ಲಾಡ್ ಅವರ ಊರು. ಲಾಡ್ ಅವರ ಮನೆಯೂ ಇಲ್ಲೇ ಇದೆ. ಸಂಡೂರು ಕಾಂಗ್ರೆಸ್ಸಿನ ಭದ್ರ ಕೋಟೆ. ತುಕಾರಾಮ್ ಅವರ ಜೊತೆ ಈಗ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿಕೊಂಡರೆ ಸಂಡೂರಿನ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...