ಹಾವೇರಿ: ಲೋಕಾಯುಕ್ತ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಹಾವೇರಿಯ ಶಿಗ್ಗಾಂವಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಆರ್. ಅಶೋಕ್ ಅವರು ಮ್ಯಾಚ್ ಫಿಕ್ಸಿಂಗ್ ಎನ್ನುವ ಪದ ಬಳಸಿರುವುದು ನ್ಯಾಯಾಂಗ ಮತ್ತು ನ್ಯಾಯಪೀಠಕ್ಕೆ ಮಾಡಿರುವ ಅಪಮಾನ. ಇದು ಸಾಂವಿಧಾನಿಕ ಹುದ್ದೆಗಳಾದ ಲೋಕಾಯುಕ್ತ ಮತ್ತು ಅಧಿಕಾರಿಗಳ ಸ್ಥಾನಕ್ಕೆ ದೊಡ್ಡ ಅಗೌರವ. ಇವು ರಾಜಕೀಯದವರು ನೇಮಕ ಮಾಡುವ ಹುದ್ದೆಗಳಲ್ಲ, ಸಾಂವಿಧಾನಿಕ ಹುದ್ದೆಗಳು ಎಂದರು.
ಅಶೋಕ್ ಅವರು ನ್ಯಾಯಾಲಯಗಳ ವಿರುದ್ಧ ಹೀಗೆ ಮಾತನಾಡಬಾರದು. ಅಶೋಕ ಅವರು, ತಾವೇ ಸಾಂವಿಧಾನಿಕ ಸ್ಥಾನದಲ್ಲಿ ಕುಳಿತು, ಮತ್ತೊಂದು ಸಾಂವಿಧಾನಿಕ ಹುದ್ದೆಯ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಆರ್. ಅಶೋಕ್ ಅವರ ಮೇಲೆ ಲೋಕಾಯುಕ್ತವು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತ ತನಿಖೆಯಲ್ಲಿ ನಂಬಿಕೆ ಇಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಡಿಸೆಂ, ಲೋಕಾಯುಕ್ತವನ್ನು ಯಾರ ಕಾಲದಲ್ಲಿ ನೇಮಕ ಮಾಡಲಾಗಿದೆ ಎಂಬುದು ತಿಳಿದಿದೆಯೇ? ಬಿಜೆಪಿ ಕಾಲದಲ್ಲಿ ನೇಮಕವಾದ ಲೊಕಾಯುಕ್ತದ ಬಗ್ಗೆ ಅವರಿಗೇ ನಂಬಿಕೆ ಇಲ್ಲ ಅಂದರೆ, ಇನ್ನು ಯಾರ ಮೇಲೆ ನಂಬಿಕೆ ಇದೆ ಅವರಿಗೆ? ಎಂದರು.