ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಅರ್. ಅಶೋಕ್, ತಮ್ಮ ರಾಜಕೀಯ ಜೀವನ ತೆರೆದ ಪುಸ್ತಕ ಎನ್ನುತ್ತಿದ್ದವರು ಈಗ ತಮ್ಮದೇ ಕೈಕೆಳಗಿನ ಪೊಲೀಸ್ ಅಧಿಕಾರಿಯಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಇದನ್ನು ನೋಡಿ ನಮಗೆ ನಾಚಿಕೆಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಹಾಗೂ ಲೋಕಾಯುಕ್ತ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಬೆಳಿಗ್ಗೆ ವಿಚಾರಣೆಗೆ ಹಾಜರಾಗುತ್ತೇನೆ. ಮಧ್ಯಾಹ್ನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ನಿನ್ನೆಯೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಮೊದಲೇ ಟೈಂ ಫಿಕ್ಸ್ ಮಾಡಿಕೊಂಡು ವಿಚಾರಣೆಗೆ ಹಾಜರಾಗಿದ್ದಾರೆ. ತನಿಖಾಧಿಕಾರಿಗಳು ಎಷ್ಟು ಹೊತ್ತು ವಿಚಾರಣೆ ನಡೆಸುತ್ತಾರೆ ಎಂದು ಅವರಿಗೆ ಗೊತ್ತಾ? ವಿಚಾರಣೆಗೆ ಸಮಯ ನಿಗದಿ ಮಾಡಿದ್ದಾರಾ? ಅಂದರೆ ಏನು ಇದು ಮ್ಯಾಚ್ ಫಿಕ್ಸಿಂಗಾ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರು ತನ್ನ 40 ವರ್ಷಗಳ ರಾಜಕೀಯ ಜೀವನ ತೆರೆದ ಪುಸ್ತಕ. ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದ್ದೇ ಹೇಳಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಲೂಟಿ ಮಾಡುವುದರಲ್ಲೇ ತೊಡಗಿದೆ. ಇಡೀ ಕರ್ನಾಟಕದ ಜನ ಕಳೆದ 16 ತಿಂಗಳಿಂದ ಇವರ ಪುಸ್ತಕ ತೆರೆದು ತೆರೆದು ನೋಡುತ್ತಿದ್ದಾರೆ ಅಭಿವೃದ್ಧಿ ಮಾತ್ರ ಏನೂ ಕಣುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಸರ್ಕಾರದಲ್ಲಿ ಪ್ರತಿದಿನ ಒಬ್ಬರಲ್ಲ ಒಬ್ಬ ಸಚಿವರು ಲೂಟಿ ಮಾಡುತ್ತಿದ್ದಾರೆ. ಈಗ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಬಯಲಾಗಿದೆ. ಮದ್ಯದಂಗಡಿ ಮಾಲೀಕರೇ ಸಚಿವರ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.