ರಾಜಸ್ಥಾನದ ಜೋಧ್‌ಪುರದ ಗಜೇಂದ್ರ ನಗರದಲ್ಲಿ ಇತ್ತೀಚೆಗೆ ವಿವಾಹವಾಗಿದ್ದ ಯುವಕನೊಬ್ಬ ʼಮೊದಲ ರಾತ್ರಿʼ ಯ ಕನಸು ಕಾಣುತ್ತಿದ್ದರೆ ವಧು ಮಾತ್ರ ಅದನ್ನು ನಿರಾಕರಿಸುತ್ತಲೇ ಬಂದಿದ್ದಳು. ಕೊನೆಗೂ ಅಸಲಿ ಸತ್ಯ ಬಹಿರಂಗವಾದಾಗ ವರನಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಹೌದು, ಈ ಖತರ್ನಾಕ್ ವಧು 3 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದು, ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ.
ಮಹಾರಾಷ್ಟ್ರ ನಿವಾಸಿ ಸುಪ್ರಿಯಾ ಅಲಿಯಾಸ್ ರೋಹಿಣಿ, ನಕಲಿ ಮದುವೆಗೆ ಬದಲಾಗಿ ವರನಿಂದ 3 ಲಕ್ಷ ರೂ. ಪಡೆದಿದ್ದು, ನಂತರ ಮದುವೆ ದಿನಾಂಕ ಹತ್ತಿರ ಬಂದಾಗ ತಾಯಿಯ ಅನಾರೋಗ್ಯದ ನೆಪ ಹೇಳಿ ಮುಂದೂಡಿದ್ದಳು. ಆದರೆ ವಾಸ್ತವವಾಗಿ ಆಕೆಗೆ ಈಗಾಗಲೇ ಮದುವೆಯಾಗಿದ್ದು, ಮಗು ಕೂಡ ಇದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸುಪ್ರಿಯಾ ಅಲಿಯಾಸ್ ರೋಹಿಣಿ, ಬಾಬುಲಾಲ್, ಸಲೀಂ ಖಾನ್, ನೇಹಾ, ಸಂತೋಷ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ನತದೃಷ್ಟ ಯುವಕನನ್ನು ಸಂಪೂರ್ಣ ಯೋಜನೆ ಮಾಡಿ ಉದ್ದೇಶಪೂರ್ವಕವಾಗಿ ಬಲೆಗೆ ಬೀಳಿಸಲಾಗಿದೆ. ಮೊದಲಿಗೆ ಆತನ ನಕಲಿ ಮದುವೆಯನ್ನು ಉದಯಪುರದ ದೇವಸ್ಥಾನವೊಂದರಲ್ಲಿ ಏರ್ಪಡಿಸಲಾಗಿತ್ತು. ನಂತರ, ಸುಪ್ರಿಯಾ ಅಲಿಯಾಸ್ ರೋಹಿಣಿ ತನ್ನ ತಾಯಿಯ ಅನಾರೋಗ್ಯದ ನೆಪದಲ್ಲಿ ಕೆಲವು ದಿನಗಳ ನಂತರ ಮಹಾರಾಷ್ಟ್ರದ ಅಕೋಲಾಕ್ಕೆ ತೆರಳಿದ್ದಳು. ಮತ್ತೆ ಆಕೆಯನ್ನು ಕರೆಸಿಕೊಳ್ಳಲಾಗಿದೆ ಆದರೆ ವಧು ಮೊದಲ ರಾತ್ರಿಯನ್ನು ನಿರಾಕರಿಸುತ್ತಲೇ ಇದ್ದಳು, ಅಲ್ಲದೇ ಎರಡು ದಿನಗಳ ನಂತರ ತನ್ನ ಹಳ್ಳಿಗೆ ಹಿಂತಿರುಗಿದವಳು ವಾಪಾಸ್ ಬರಲೇ ಇಲ್ಲ. ತನಗೆ ಹೆಚ್ಚು ತೊಂದರೆ ನೀಡಿದರೆ ಅಥವಾ ಬರುವಂತೆ ಒತ್ತಡ ಹೇರಿದರೆ ಮಾನವ ಕಳ್ಳಸಾಗಣೆಯಲ್ಲಿ ಸಿಲುಕಿಸುವುದಾಗಿ ವಧು ಬೆದರಿಕೆ ಹಾಕಿದ್ದಳು.