ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿರುವ ಕೆಲವು ಕಾಂಗ್ರೆಸ್ ಶಾಸಕರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ್ದಾರೆ.
ನೂತನವಾಗಿ ಆಯ್ಕೆಯಾದ ದಲಿತ, ಲಿಂಗಾಯಿತ, ಒಕ್ಕಲಿಗ ಸಮುದಾಯದ 20ಕ್ಕೂ ಹೆಚ್ಚು ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ವಕ್ಫ್ ಆಸ್ತಿ ವಿವಾದಕ್ಕೆ ಕಾರಣವಾಗಿರುವ ಜಮೀರ್ ಅಹಮದ್ ಖಾನ್ ಗೆ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಜಮೀರ್ ನಡೆಯಿಂದ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷ ಭಾರಿ ಬೆಲೆ ತೆರಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ಸರ್ಕಾರ ಮತ್ತು ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು ತಕ್ಷಣವೇ ಮಧ್ಯ ಪ್ರವೇಶಿಸಬೇಕೆಂದು ಕೆಲವು ಶಾಸಕರು ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ವಕ್ಫ್ ಆಸ್ತಿ ನೋಟಿಸ್ ವಿಷಯ ರಾಜ್ಯದಲ್ಲಿ ರಾಜಕೀಯವಾಗಿ ವಿವಾದಕ್ಕೆ ಕಾರಣವಾಗಿದೆ. ರೈತರಿಂದಲೂ ಭಾರಿ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗೆ ಕಾರಣವಾಗಿದೆ. ಇದಕ್ಕೆ ಜಮೀರ್ ಅಹಮದ್ ಕೈಗೊಂಡ ವಕ್ಫ್ ಅದಾಲತ್ ಕಾರಣವಾಗಿದ್ದು, ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತರುವಂತಹ ನಡವಳಿಕೆ ತೋರುತ್ತಿರುವ ಜಮೀರ್ ಅಹ್ಮದ್ ಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಲಾಗಿದೆ.