ನವದೆಹಲಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಿಬಿಐಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ನ್ಯಾ.ಸೂರ್ಯಕಾಂತ್ ಹಾಗೂ ನ್ಯಾ.ಉಜ್ವಲ್ ಭುಯನ್ ಅವರಿದ್ದ ಪೀಠ ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದು, ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದೆ ಎಂದು ಸಾಲಿಸಿಟರ್ ಜನರಲ್ ಗಮನ ಸೆಳೆದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿರುವುದನ್ನು ಹಿಂಪಡೆದಿದ್ದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌದ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ಕೂಡ ಬಾಕಿ ಇದೆ. ಈ ನಡುವೆ ಸೆ.17ರಂದು ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಉತ್ತರಿಸಲು ಡಿ.ಕೆ.ಶಿವಕುಮಾರ್ ಪರ ವಕೀಲರು ಕಾಲಾವಕಾಶ ಕೇಳಿರುವುದರಿಂದ ಸಿಬಿಐ ಮನವಿಯ ವಿಚಾರಣೆಗೆ ದಿನಾಂಕ ನಿಗದಿಯಾಗಿಲ್ಲ ಎಂಬ ಅಂಶವನ್ನು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ಈ ವೇಳೆ ಸುಪ್ರೀಂ ಕೋರ್ಟ್ ಸಿಬಿಐ ಸಲ್ಲಿಕೆ ಮಾಡಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿ ಆದೇಶ ಹೊರಡಿಸಿದೆ.