ಬೆಂಗಳೂರು: ವಕ್ಫ್ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಯತ್ನಾಳ್ ಓರ್ವ ಮಾನಸಿಕ ಅಸ್ವಸ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡುವಂತೆ ಯತ್ನಾಳ್ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ವಿಚಾರವಾಗಿ, ಯತ್ನಾಳ್ ಮಾನಸಿಕ ಅಸ್ವಸ್ಥ. ಮಾನಸಿಕವಾಗಿ ಅಸ್ವಸ್ಥರಾಗಿರುವ, ಹುಚ್ಚಾಸ್ಪತ್ರೆ ಸೇರಬೇಕಿರುವ ವ್ಯಕ್ತಿಗಳ ಬಗ್ಗೆ ನಾನು ಮಾತನಾಡಲ್ಲ ಎಂದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಡಿಸಿಎಂ, ನಾವು ಜಾರಿಗೆ ತಂದಿರುವ ಜನಪರ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರಿಂದ ಮಾಡಲು ಆಗಲಿಲ್ಲ. ಅಕ್ಕ-ತಂಗಿ, ತಂದೆ-ಮಗ, ಅಪ್ಪ-ಮಕ್ಕಳ ನಡುವೆ ಜಗಳ ತಂದಿಟ್ಟು, ಭಾವನೆಗಳ ಮೇಲೆ ಆಟವಾಡುವುದೇ ಅವುಗಳ ಕೆಲಸ. ಹೀಗೆ ಮಾಡಿ ಎಷ್ಟೋ ಮನೆಗಳನ್ನು ಒಡೆದು ಹಾಕಿವೆ ಎಂದು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದವರಿಗೆ ರಾಜಕೀಯ ಹೊರತಾಗಿ ಯಾವ ವಿಚಾರಗಳೂ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಸಂಸಾರಗಳನ್ನು ಹಾಳು ಮಾಡುತ್ತವೇ ಎಂದು ಹೇಳಿದ್ದರು. ಆದರೆ ಅವರು ಹೇಳಿದಂತೆ ಆಗಲಿಲ್ಲ. ನಮ್ಮ ಕೆಲಸಗಳನ್ನು ನೋಡಿ, ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದರು.