ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ 29 ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 28 ರವರೆಗೆ ಸಲ್ಲಿಸಬಹುದಾಗಿದೆ.
ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು, ಇದಕ್ಕಾಗಿ ಅಕ್ಟೋಬರ್ 29 ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದಾಗಿದೆ.
ಮತದಾರರು ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಪಟ್ಟಿಯಿಂದ ಕೈಬಿಡುವುದು ಸೇರಿದಂತೆ ಯಾವುದೇ ತಿದ್ದುಪಡಿಗಳಿದ್ದಲ್ಲಿ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗೆ, ತಾಲ್ಲೂಕು ಕಚೇರಿಗೆ, ಉಪವಿಭಾಗಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ದಾವಣಗೆರೆ ನಗರದಲ್ಲಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕು. ಆಕ್ಷೇಪಣೆ, ಸೇರ್ಪಡೆ, ತಿದ್ದುಪಡಿಗಳನ್ನು ಬರುವ ನವೆಂಬರ್ 28 ರ ವರೆಗೆ ಸ್ವೀಕರಿಸಲಾಗುತ್ತದೆ. ನಿಗಧಿತ ನಮೂನೆಯಲ್ಲಿ ಸಲ್ಲಿಸಬಹುದಾಗಿದೆ.
ಈ ಅವಧಿಯಲ್ಲಿ ಬರುವ ರಜಾ ದಿನಗಳಾದ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಪರಿಷ್ಕರಣೆಯ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. 2025 ರ ಜನವರಿ 1 ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಸಹ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಎಲ್ಲಾ ಆಕ್ಷೇಪಣೆಗಳನ್ನು ಡಿಸೆಂಬರ್ 24 ರೊಳಗಾಗಿ ಇತ್ಯರ್ಥ ಮಾಡಿ 2025 ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಕಾರ್ಯಕರ್ತರ ಮೂಲಕ, ಮತಗಟ್ಟೆ ಮಟ್ಟದ ಏಜೆಂಟರ ಮೂಲಕ ಸಾರ್ವಜನಿಕರಿಗೆ ತಿಳಿಸಲು ಮನವಿ ಮಾಡಲಾಗಿದೆ.
ಮತದಾರರ ಹೊಸದಾಗಿ ಸೇರ್ಪಡೆಗೆ ನಮೂನೆ-6, ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ನಾಗರೀಕರು ನಮೂನೆ-6ಎ, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ, ಇತರೆ 11 ದಾಖಲೆಗಳ ಜೋಡಣೆಗೆ ನಮೂನೆ-6ಬಿ, ಹೆಸರು ತೆಗೆದು ಹಾಕಲು ನಮೂನೆ-7, ತಿದ್ದುಪಡಿ ಸ್ಥಳಾಂತರ ಮಾಡಲು ನಮೂನೆ-8 ರಲ್ಲಿ ಸಲ್ಲಿಸಬೇಕು. ಅರ್ಜಿಗಳನ್ನು ಆನ್ಲೈನ್ನಲ್ಲಿಯು ಸಲ್ಲಿಸಬಹುದಾಗಿದ್ದು, www.nsvp.in ಹಾಗೂ ವೋಟರ್ ಹೆಲ್ಪ್ ಲೈನ್ ಆಪ್ ಹಾಗೂ ceo.karnataka.gov.in ವೆಬ್ಸೈಟ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.