ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಅಧಿಕಾರಿಗಳು ಹಾಗೂ ಬಿಲ್ಡರ್ ಗಳ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಆರ್ ಟಿಐ ಕಾರ್ಯಕರ್ತ ಗಂಗರಾಜು ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಶಾಂತಿನಗರದ ಇಡಿ ಕಚೇರಿಗೆ ಹಾಜರಾದ ಗಂಗರಾಜು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಅಕ್ಟೋಬರ್ 22ರಂದು ನನಗೆ ಇಡಿಯಿಂದ ನೋಟಿಸ್ ಜಾರಿಯಾಗಿತ್ತು. ಅ.23ರಂದು ಸಂಜೆ ನನಗೆ ನೋಟಿಸ್ ಬಂದಿತ್ತು. ಅ.24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಹಾಗಾಗಿ ಕಾಲಾವಕಾಶ ಕೇಳಿದ್ದೆ. ಇಂದು ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದರು.
ಇಡಿ ಅಧಿಕಾರಿಗಳು ನನ್ನ ಬಳಿ ವೈಯಕಿಕ ದಾಖಲೆಗಳನ್ನೂ ಕೇಳಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 50:50 ನಿವೇಶನ ಹಗರಣ ಸೇರಿದಂತೆ 1929ರಿಂದ ಇಲ್ಲಿಯವರೆಗಿನ ಸುಮಾರು ಸಾವಿರಾರು ಪುಟಗಳ ದಾಖಲೆಗಳಿವೆ ಎಂದಿದ್ದೆ. ಈ ನಿಟ್ಟಿನಲ್ಲಿ ಇಡಿ ದಾಳಿ ನಡೆದಿದೆ. ನನಗೆ ಲೋಕಾಯುಕ್ತ ತನಿಖೆಯಲ್ಲಿ ನಂಬಿಕೆ ಇಲ್ಲ. ಇಡಿ ತನಿಖೆಯಲ್ಲಿ ನಂಬಿಕೆಯಿದೆ ಎಂದು ಹೇಳಿದರು.