ಪ್ರಯಾಗ್ ರಾಜ್: ಡ್ರೈವಿಂಗ್ ಸ್ಕೂಲ್ ಗಳಿಗೆ ಪರವಾನಿಗೆ ನೀಡುವ ಮತ್ತು ನಿಯಂತ್ರಿಸುವ ನಿಯಮಗಳನ್ನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಈ ಅಧಿಕಾರವಿದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಉತ್ತರ ಪ್ರದೇಶ ಸರ್ಕಾರ 2023ರಲ್ಲಿ ಖಾಸಗಿ ಮೋಟಾರ್ ವಾಹನಗಳ ತರಬೇತಿ ಶಾಲೆಗಳಿಗೆ ಎಸ್‌ಓಪಿ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘ ಮತ್ತು ಇತರೆ 7 ಮಂದಿ ಸಲ್ಲಿಸಿದ್ದ ರಿಟ್ ಅರ್ಜಿಗೆ ಅನುಮತಿ ನೀಡಿದ ನ್ಯಾಯಮೂರ್ತಿ ಅಂಜನಿ ಕುಮಾರ್ ಮಿಶ್ರಾ, ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಅವರನ್ನು ಒಳಗೊಂಡ ನ್ಯಾಯಪೀಠ ಸರ್ಕಾರದ ಆದೇಶವನ್ನು ಅಕ್ಟೋಬರ್ 25 ರಂದು ವಜಾಗೊಳಿಸಿದೆ.
ಮೋಟಾರ್ ವಾಹನಗಳ ಚಾಲನೆ ಮತ್ತು ಸಂಬಂಧಿತ ವಿಷಯಗಳಲ್ಲಿ ಪ್ರಮುಖ ಸೂಚನೆ ನೀಡುವುದು, ಡ್ರೈವಿಂಗ್ ಸ್ಕೂಲ್ ಗಳು ಮತ್ತು ಸಂಸ್ಥೆಗಳಿಗೆ ಪರವಾನಿಗೆ ನೀಡುವ, ನಿಯಂತ್ರಿಸುವ ಉದ್ದೇಶಕ್ಕಾಗಿ ನಿಯಮ ರೂಪಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಮಾತ್ರ ಹೊಂದಿದೆ ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ ಗೆ ವಿವರಣೆ ಸಲ್ಲಿಸಿದ್ದಾರೆ. ವಿಚಾರಣೆ ಆಲಿಸಿದ ನ್ಯಾಯಪೀಠ, ಡ್ರೈವಿಂಗ್ ಸ್ಕೂಲ್ ಗಳಿಗೆ ಪರವಾನಿಗೆ ನೀಡುವ ಮತ್ತು ನಿಯಂತ್ರಿಸುವ ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲವೆಂದು ತೀರ್ಪು ನೀಡಿದೆ.