alex Certify BIG NEWS: ಮಳೆ ಅಬ್ಬರಕ್ಕೆ ರಾಜ್ಯದಲ್ಲಿ 25 ಜನರು ಸಾವು: 84 ಮನೆಗಳು ಸಂಪೂರ್ಣ ಹಾನಿ: ಮನೆ ನಿರ್ಮಾಣ, ಪರಿಹಾರ ಘೋಷಿಸಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಳೆ ಅಬ್ಬರಕ್ಕೆ ರಾಜ್ಯದಲ್ಲಿ 25 ಜನರು ಸಾವು: 84 ಮನೆಗಳು ಸಂಪೂರ್ಣ ಹಾನಿ: ಮನೆ ನಿರ್ಮಾಣ, ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಹಿಂಗಾರು ಮಳೆ, ಅತಿವೃಷ್ಟಿಯಿಂದ ರಾಜ್ಯದಲ್ಲಿ ಉಂಟಾದ ಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಈ ವೇಳೆ ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ನೀಡಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಯಮಾವಳಿ ಪ್ರಕಾರ ತಕ್ಷಣ ಪರಿಹಾರ ಒದಗಿಸಿ ಜನರಿಗೆ ಸಾಂತ್ವಾನ ನೀಡುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಂಗಾರು ಅವಧಿಯಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 505.81 ಟಿಎಂಸಿ ಇತ್ತು. ಈ ಬಾರಿ ಜಲವಿದ್ಯುತ್‌ ಉತ್ಪಾದನೆಗೆ ಉತ್ತಮ ಪ್ರಮಾಣದ ನೀರು ಲಭ್ಯವಿದೆ. ಕಾವೇರಿ ಕಣಿವೆ ಹಾಗೂ ಕೃಷ್ಣಾ ಕಣಿವೆಯಲ್ಲೂ ಉತ್ತಮ ನೀರು ಸಂಗ್ರಹವಿದೆ. ಕುಡಿಯುವ ನೀರಿಗೆ ಸಾಕಷ್ಟು ನೀರನ್ನು ಇಟ್ಟುಕೊಂಡು ನೀರಾವರಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ 25 ಜನರು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ 19 ದೊಡ್ಡ ಜಾನುವಾರುಗಳು, 66 ಸಣ್ಣ ಜಾನುವಾರುಗಳು ಸಾವಿಗೀಡಾಗಿವೆ. ಎಸ್‌ಡಿಆರ್‌ಎಫ್‌ ನಿಯಮಾನುಸಾರ ದೊಡ್ಡ ಜಾನುವಾರುಗಳಿಗೆ ಒಟ್ಟು ರೂ. 6.84 ಲಕ್ಷ, ಸಣ್ಣ ಜಾನುವಾರುಗಳಿಗೆ ಒಟ್ಟು ರೂ. 2.8 ಲಕ್ಷ ಸೇರಿದಂತೆ ಒಟ್ಟು ರೂ. 9.6 ಲಕ್ಷ ಪರಿಹಾರ ಪಾವತಿಸಲಾಗಿದೆ.

ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದಾಗಿ 84ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2077ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆ ಹಾನಿಗೆ 1.20ಲಕ್ಷ ರೂ ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸೂಚಿಸಿರುವಂತೆ ರೂ.50 ಸಾವಿರದವರೆಗೆ ಪರಿಹಾರ ಒದಗಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ಇನ್ನು ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಜಂಟಿ ಸಮೀಕ್ಷೆ ಕಾರ್ಯವನ್ನು ಒಂದು ವಾರದ ಒಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಹಾನಿ ಮತ್ತು ಪ್ರಾಣ ಹಾನಿ ಪ್ರಕರಣಗಳಲ್ಲಿ 48 ಗಂಟೆಗಳ ಒಳಗಾಗಿ ಪರಿಹಾರವನ್ನು ಒದಗಿಸುವಂತೆ ತಿಳಿಸಲಾಗಿದೆ.

ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಲಭ್ಯವಿದ್ದು, ಅನುದಾನ ಕೊರತೆ ಇರುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...