alex Certify ‘ಕಿತ್ತೂರು ರಾಣಿ’ ಚೆನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲು ಆದೇಶಿಸಿದ್ದು ನಾವೇ : CM ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಿತ್ತೂರು ರಾಣಿ’ ಚೆನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲು ಆದೇಶಿಸಿದ್ದು ನಾವೇ : CM ಸಿದ್ದರಾಮಯ್ಯ

ಬೆಂಗಳೂರು : ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲ ಬಾರಿಗೆ ಆದೇಶಿಸಿದವರು ನಾವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮಾಜಿಯವರ ವಿಜಯೋತ್ಸವದ ಸ್ಮರಣಾರ್ಥ ಇಂದು ನಡೆದ “ಚೆನ್ನಮ್ಮನ ಕಿತ್ತೂರು ಉತ್ಸವ”ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಇವತ್ತಿನ‌ ಪೀಳಿಗೆಗೆ ಚೆನ್ನಮ್ಮನ ಇತಿಹಾಸ ಗೊತ್ತಾಗಬೇಕು ಎನ್ನುವ ಕಾರಣದಿಂದ ನಾವು ಈ ನಿರ್ಧಾರ ಮಾಡಿದೆವು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾಗದು ಎನ್ನುವ ಅಂಬೇಡ್ಕರ್ ಅವರ ಮಾತು ನಮಗೆ ಪ್ರೇರಣೆ. ನಾನು ಸಂಗೊಳ್ಳಿ ರಾಯಣ್ಣ-ಕಿತ್ತೂರು ಚೆನ್ನಮ್ಮನ ಅಭಿಮಾನಿ. ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದವರ ಹೋರಾಟ ಮತ್ತು ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಹೋರಾಟಗಾರರಿಂದ ದೇಶದ ಜನರನ್ನು ಪ್ರೀತಿಸುವುದನ್ನು ನಾವು ಕಲಿಯಬೇಕು.

ದೇಶ ಅಂದರೆ ದೇಶದ ಜನ. ಯಾವುದೇ ಧರ್ಮದವರಿರಲಿ, ಯಾವುದೇ ಜಾತಿಯವರಿರಲಿ ಎಲ್ಲರೂ ನಮ್ಮ ದೇಶದ ಜನ. ದೇಶದ ಜನರನ್ನು ಪ್ರೀತಿಸುವುದೇ ನಿಜವಾದ, ಸರಿಯಾದ ದೇಶಪ್ರೇಮ. ಬಸವಣ್ಣನವರೂ ಇದನ್ನೇ ಹೇಳಿದ್ದರು. ಜಾತಿ, ಧರ್ಮದ ತಾರತಮ್ಯ ಇಲ್ಲದಂತೆ ಮನುಷ್ಯ ಪ್ರೀತಿಯನ್ನು ಸಾರಿದವರು ಬಸವಣ್ಣ. ಹೀಗಾಗಿ ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಜಾತಿ, ಧರ್ಮದ ಅಸಮಾನತೆ ಸಮಾಜದಲ್ಲಿ ಇರುವಷ್ಟೂ ದಿನ ಸಾಮಾಜಿಕ ನ್ಯಾಯ ಬರಲು ಸಾಧ್ಯವಿಲ್ಲ. ಇದು ಸಾಧ್ಯವಾಗಬೇಕಾದರೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಲ್ಲಾ ಜಾತಿ, ಧರ್ಮ, ಎಲ್ಲಾ ವರ್ಗದವರಿಗೂ ಸಿಗಬೇಕು. ದೇಶದ ಜನರನ್ನು ಪ್ರೀತಿಸಿ, ದೇಶದ ಜನರ ಸ್ವಾತಂತ್ರ್ಯ ರಕ್ಷಣೆಗಾಗಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರಾಣತ್ಯಾಗ ಮಾಡಿದ್ದಾರೆ. ಇದು ಅತ್ಯುನ್ನತವಾದ ತ್ಯಾಗ. ಇದನ್ನು ನಾವು, ನೀವು, ಇವತ್ತಿನ‌ ಪೀಳಿಗೆ ಪಾಲಿಸಬೇಕು ಎಂದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...