ಗಾಳಿಪಟ ಹಾರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಅದರ ವಿವರ ಇಲ್ಲಿದೆ. ಗಾಳಿಪಟ ಹಾರಿಸಲು ಹತ್ತಿಯಿಂದ ಮಾಡಿದ ದಾರ ಮಾತ್ರ ಬಳಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ನೈಲಾನ್ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಬಳಸಿ ತಯಾರಿಸಲಾದ ಚೀನಿ ಮಾಂಜಾ, ಚೀನಿ ದಾರಗಳನ್ನು ಬಳಸಿ ಗಾಳಿಪಟ ಹಾರಿಸಿದ ವೇಳೆ ಕೆಲವೊಂದು ಪ್ರಾಣಾಪಾಯದ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಅಲ್ಲದೆ ಇಂತಹ ಅಪಾಯಕಾರಿ ವಸ್ತುಗಳಿಂದ ತಯಾರಿಸಲಾದ ದಾರ ದಾಸ್ತಾನು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಹತ್ತಿಯಿಂದ ಮಾಡಿದ ದಾರಗಳಿಗೂ ಸಹ ಹರಿತ ಲೋಹ ಅಥವಾ ಗಾಜಿನ ವಸ್ತುಗಳನ್ನು ಬಳಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.