ಬೆಂಗಳೂರು : ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷಿ ʼಗೃಹ ಆರೋಗ್ಯ: ಆರೋಗ್ಯ ಸೇವೆ ಮನೆ ಬಾಗಿಲಿಗೆʼ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
ಈ ಯೋಜನೆಯಡಿ ಗ್ರಾಮೀಣ ಪ್ರದೇಶದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತಪಾಸಣೆಗಳು ಮನೆ ಬಾಗಿಲಲ್ಲಿ ದೊರೆಯಲಿವೆ.
ಬಹಳ ಜನ ಆರೋಗ್ಯ ತಪಾಸಣೆಯನ್ನೇ ಮಾಡಿಸಿಕೊಂಡಿರುವುದಿಲ್ಲ. ಹೀಗಾಗಿ ಮನೆಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡುವ ಮಹತ್ವದ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ “ಗೃಹ ಆರೋಗ್ಯ- ಆರೋಗ್ಯ ಸೇವೆ ಮನೆ ಬಾಗಿಲಿಗೆ” ನೂತನ ಜನಾರೋಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಮನೆ ಬಾಗಿಲಿಗೆ ಆರೋಗ್ಯ ಸವಲತ್ತು ಒದಗಿಸುವ ಗುರಿ ನಮ್ಮದಾಗಿದೆ. ಕ್ಯಾನ್ಸರ್ ಕೂಡ ಆರಂಭದಲ್ಲೇ ಪತ್ತೆಯಾದರೆ ಗುಣಪಡಿಸಲು ಸಾಧ್ಯವಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡವನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಶಿಸ್ತಿನ ವ್ಯಾಯಾಮಯುಕ್ತ ಜೀವನಶೈಲಿ ಮುಖ್ಯ. ಒತ್ತಡದ ಜೀವನದಿಂದಲೂ ಕಾಯಿಲೆಗಳು ಬರುತ್ತವೆ. ಈಗ ರಸಾಯನಿಕ ಬಳಸಿದ ಆಹಾರದ ಸೇವನೆ ಹೆಚ್ಚಾಗಿರುವುದರಿಂದಲೂ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಮೊಟ್ಟೆ, ಮೀನು, ಮಾಂಸ ತಿಂದರೆ ಡಾಯಾಬಿಟಿಕ್ ಬರುತ್ತದೆ, ಹೆಚ್ಚುತ್ತದೆ ಎನ್ನುವ ತಪ್ಪುಕಲ್ಪನೆ ಇದೆ. ಹಾಗೇನೂ ಇಲ್ಲ. ಮೊಟ್ಟೆ ಮಾಂಸ ಬಿಟ್ಟು ಬರೀ ಅನ್ನ ತಿಂದರೆ ಹೇಗೆ ? ಬ್ಯಾಲೆನ್ಸ್ಡ್ ಆಹಾರ ಸೇವನೆ ಕೂಡ ಮುಖ್ಯ ಎಂದರು.
ಹಳ್ಳಿಗಾಡಿನ ಜನರು ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಇದೀಗ ಆರೋಗ್ಯ ಇಲಾಖೆಯನ್ನೇ ಜನರ ಮನೆ ಬಳಿಗೆ ಕಳುಹಿಸುತ್ತಿದ್ದೇವೆ. ನಮ್ಮ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಏನಿದರ ಉದ್ದೇಶ
ಈ ಯೋಜನೆಯಡಿ ಗ್ರಾಮೀಣ ಪ್ರದೇಶದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತಪಾಸಣೆಗಳು ಮನೆ ಬಾಗಿಲಲ್ಲಿ ದೊರೆಯಲಿವೆ.
ಗೃಹ ಆರೋಗ್ಯ ಯೋಜನೆಯ ಪ್ರಮುಖ ಅಂಶಗಳು
ಆರೋಗ್ಯ ಕಾರ್ಯಕರ್ತರ ತಂಡ ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರ ಮನೆಗಳಿಗೆ ಭೇಟಿ ನೀಡಿ ಪ್ರಮುಖ 6 ಅಸಾಂಕ್ರಾಮಿಕ ರೋಗಗಳಾದ ಮಧುಮೇಹ (ಸಕ್ಕರೆ ಕಾಯಿಲೆ), ಅಧಿಕ ರಕ್ತದೊತ್ತಡ (BP) ಸಂಬಂಧ ಪರೀಕ್ಷೆ ಮತ್ತು ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತಪಾಸಣೆ
ಆಯುಷ್ ಪದ್ಧತಿಯ ಸಂವರ್ಧನೆ ಮೂಲಕ ಜೀವನಶೈಲಿ ಮಾರ್ಪಾಡು ಹಾಗೂ ಚಿಕಿತ್ಸಾ ಕ್ರಮಗಳಿಂದ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ನಿರ್ವಹಣೆಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ವೈದ್ಯರ ಸಲಹೆಯಂತೆ ನಿರಂತರ ಉಚಿತ ಔಷಧಿಗಳ ವಿತರಣೆ
ಅಸಾಂಕ್ರಾಮಿಕ ರೋಗಗಳಿಗೆ ಪ್ರಮುಖ ಕಾರಣಗಳಾದ – ಸ್ಟೀಪ್ ಅಗ್ನಿಯಾ (ನಿದ್ರೆಯಲ್ಲಿ ಉಸಿರುಕಟ್ಟುವಿಕೆ), BMI ಅಸಮತೋಲನ, ಧೂಮಪಾನ ಮತ್ತು ಮದ್ಯಪಾನ, ವ್ಯಸನ ಮುಕ್ತದ ಬಗ್ಗೆ ಆರೋಗ್ಯ ಶಿಕ್ಷಣ ಮತ್ತು ಆಪ್ತ ಸಮಾಲೋಚನೆಯ ಮುಖಾಂತರ ನಿಯಂತ್ರಣಕ್ಕೆ ಕ್ರಮ
ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ನಿರಂತರ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯ ಮೂಲಕ ಅಡ್ಡ ಪರಿಣಾಮ ಮತ್ತು ಅಕಾಲಿಕ ಮರಣ ತಡೆಗಟ್ಟುವುದು ಯೋಜನೆಯ ಪ್ರಮುಖ ಉದ್ದೇಶ.
ಪ್ರಾರಂಭಿಕವಾಗಿ ಕೋಲಾರ ಜಿಲ್ಲೆಯಲ್ಲಿ ಜಾರಿ ಜನವರಿ 2025 ರಿಂದ ರಾಜ್ಯಾದ್ಯಂತ ವಿಸ್ತರಣೆ