ಭುವನೇಶ್ವರ: ಮಹಿಳಾ ನೌಕರರಿಗೆ ಪ್ರತಿ ತಿಂಗಳು ವೇತನ ಸಹಿತ ಮುಟ್ಟಿನ ರಜೆ ನೀಡಲಾಗುವುದು ಎಂದು ಒಡಿಶಾ ಸರ್ಕಾರ ಘೋಷಣೆ ಮಾಡಿದೆ.
ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದರಂತೆ ವಾರ್ಷಿಕ 12 ದಿನ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದ್ದು, ಈಗಿರುವ 15 ದಿನ ಸಾಮಾನ್ಯ ರಜೆಗಳನ್ನು ಹೊರತುಪಡಿಸಿ ಮಹಿಳಾ ನೌಕರರು ವಾರ್ಷಿಕವಾಗಿ 12 ದಿನ ಮುಟ್ಟಿನ ರಜೆ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವುದಾಗಿ ಘೋಷಣೆ ಮಾಡಿತ್ತು. ಇದೀಗ ರಜೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಜಾರಿಗೊಳಿಸಲಾಗಿದೆ.
ಹಿಂದಿನ ಬಿಜೆಡಿ ಸರ್ಕಾರ ಮಹಿಳೆಯರಿಗೆ 10 ದಿನ ಹೆಚ್ಚುವರಿ ರಜೆ ನೀಡಿತ್ತು. ಇದರೊಂದಿಗೆ 15 ಸಿಎಲ್ ಸೇರಿ 25 ದಿನ ರಜೆ ನೀಡಲಾಗಿತ್ತು. ಈಗ ಹೆಚ್ಚುವರಿಗಾಗಿ ಎರಡು ದಿನ ರಜೆ ಸೇರಿಸಿ ಮಹಿಳಾ ನೌಕರರಿಗೆ ಒಟ್ಟು 27 ಸಾಂದರ್ಭಿಕ ರಜೆ ನೀಡಲಾಗುವುದು.
ಮಹಿಳಾ ಉದ್ಯೋಗಿಗಳು ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಈ ನೀತಿಯು ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಸಹಾಯಕವಾದ ಕೆಲಸದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಅವರ ಋತುಚಕ್ರದ ಕಾರಣದಿಂದಾಗಿ ಅವರು ಎದುರಿಸುತ್ತಿರುವ ಸವಾಲುಗಳನ್ನು ಒಪ್ಪಿಕೊಳ್ಳುತ್ತದೆ ಎಂದು ಹೇಳಲಾಗಿದೆ.