
ಬೆಂಗಳೂರು: ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಜನಸಂದಣಿ ಕಡಿಮೆ ಮಾಡುವ ಉದ್ದೇಶದ ನೋಂದಣಿ ತಿದ್ದುಪಡಿ ಮಸೂದೆ -2023ಕ್ಕೆ ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ.
ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆಯೇ ಆನ್ಲೈನ್ ಮೂಲಕ ಡಿಜಿಟಲ್ ಸಹಿ ಇರುವ ದಾಖಲೆಗಳನ್ನು ಸಲ್ಲಿಸಿ ಆಸ್ತಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯ ನೋಂದಣಿ ತಿದ್ದುಪಡಿ ಕಾಯ್ದೆಗೆ ಫೆಬ್ರವರಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ದೊರೆತಿತ್ತು.
ನಂತರ ಮಸೂದೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಮಸೂದೆಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳ ಕೇಳಿದ್ದರು. ಸ್ಪಷ್ಟನೆ ದೊರೆತ ನಂತರ ಸೆಪ್ಟಂಬರ್ ನಲ್ಲಿ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದರು. ಇದೀಗ ರಾಷ್ಟ್ರಪತಿಗಳು ಮಸೂದೆಗೆ ಅನುಮೋದನೆ ನೀಡಿದ್ದು, ಈ ಕುರಿತಾಗಿ ರಾಜ್ಯ ಸರ್ಕಾರ ರಾಜ್ಯ ಪತ್ರ ಪ್ರಕಟಿಸಿದೆ.