ಜಾಗತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಕಚ್ಚಾ ತೈಲದ ದರದಲ್ಲಿ 4.70ರಷ್ಟು ಇಳಿಕೆಯಾಗಿದ್ದು, ಎರಡು ವಾರದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಕಾರಣ ಕಳೆದ ಎರಡು ವಾರದಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹಾದಿಯಲ್ಲಿತ್ತು.
ಉತ್ಪಾದನೆ ಮತ್ತು ಸಂಗ್ರಹಾಗಾರಗಳ ಮೇಲೆ ವಾಯು ದಾಳಿ ನಡೆಸುವುದಿಲ್ಲವೆಂದು ಇಸ್ರೇಲ್ ಘೋಷಿಸಿರುವುದಾಗಿ ವರದಿಯಾಗಿದೆ. ಹೀಗಾಗಿ ತೈಲಪೂರೈಕೆ ಸರಪಳಿಗೆ ಎದುರಾಗಿದ್ದ ಆತಂಕ ದೂರವಾಗಿದೆ. ಆಮದು ರಾಷ್ಟ್ರಗಳಿಂದ ಬೇಡಿಕೆ ಕಡಿಮೆಯಾಗಿದ್ದು, ಇದರ ಕಾರಣ ಕಚ್ಚಾ ತೈಲ ದರ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಬ್ರೆಂಟ್ ಕಚ್ಚಾ ತೈಲದರ ಬ್ಯಾರೆಲ್ ಗೆ 3.51 ಡಾಲರ್ ಇಳಿಕೆಯಾಗಿದ್ದು, ಪ್ರಸ್ತುತ ಬ್ಯಾರಲ್ ಗೆ 73.81 ಡಾಲರ್ ದರ ಇದೆ. ಟೆಕ್ಸಾಸ್ ಇಂಟರ್ ಮೀಡಿಯೇಟ್ ಕಚ್ಚಾತೈಲದ ದರ 3.48 ಡಾಲರ್ ನಷ್ಟು ಕಡಿಮೆಯಾಗಿದ್ದು, ಬ್ಯಾರೆಲ್ ಗೆ 70.35 ಡಾಲರ್ ದರ ಇದೆ.