ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಝಾನ್ಸಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಕ್ಕಿ ಫ್ಯಾಕ್ಟರಿ ಬಳಿಯ ಶಿವಪುರಿ ಲಿಂಕ್ ರಸ್ತೆಯಲ್ಲಿ ಮುಂಜಾನೆ 3 ರಿಂದ 4 ಗಂಟೆಯ ನಡುವೆ ಅಪಘಾತ ಸಂಭವಿಸಿದೆ. ಘಟನೆಯ ವೇಳೆ ಕಾರಿನಲ್ಲಿ ಐವರು ಇದ್ದರು.
ಪೊಲೀಸರ ಪ್ರಕಾರ, ಐವರು ಸ್ನೇಹಿತರಾಗಿದ್ದು, ತಡರಾತ್ರಿ ಸಂತೌ ಗ್ರಾಮದ ಶಿಟ್ಲಾ ಮಾತಾ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಪೂಜೆ ಮುಗಿಸಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ.
ಮೃತರನ್ನು ಸಂಜಯ್ ಧಕಡ್(24), ವಿವೇಕ್ ಜೋಶಿ (22), ಮತ್ತು ಹೃತಿಕ್ ಮಾಂಝಿ (22) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಅಂಕಿತ್ ಶರ್ಮಾ ಮತ್ತು ಮೊಹಿಲ್ ರೈ ಎಂದು ಗುರುತಿಸಲಾಗಿದೆ.
ಗ್ವಾಲಿಯರ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ(ಎಎಸ್‌ಪಿ) ನಿರಂಜನ್ ಶರ್ಮಾ ಮಾಹಿತಿ ನೀಡಿದ್ದು, ಮೇಲ್ನೋಟಕ್ಕೆ ಕಾರು ಅತಿವೇಗದಲ್ಲಿ ಓಡಿದ ಕಾರಣ ಅಪಘಾತದಲ್ಲಿ ಛಿದ್ರವಾಗಿದೆ. ಕಾರ್ ಇಂಜಿನ್ ನೆಲದ ಮೇಲೆ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.