ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೇರಿದ್ದು, ದೆಹಲಿ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಗಣ್ಯರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಈ ಬಾರಿ ಹರಿಯಾಣದ ಜನ ಕೊಟ್ಟ ತೀರ್ಮಾನ ಅದ್ಭುತವಾಗಿದೆ. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದೆ. ಹರಿಯಾಣ ಜನ ಬಿಜೆಪಿಗೆ 3ನೇ ಬಾರಿಗೆ ಗೆಲುವು ತಂದುಕೊಟ್ಟಿದ್ದಾರೆ. ಇದು ಕಾರ್ಯಕರ್ತರ ಪರಿಶ್ರಮದ ಗೆಲುವು. ಹರಿಯಾಣದ ಜನ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲಾ ಜಾತಿಯ ಜನ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಗೆಲುವಾಗಿದೆ. ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ. ನಡ್ಡಾ ತಂಡದ ಪ್ರಯತ್ನದಿಂದ ಗೆಲುವು ದೊರೆತಿದೆ. ನವರಾತ್ರಿಯ ದಿನ ದೇವಿ ನಮಗೆ ಆಶೀರ್ವಾದ ಮಾಡಿದ್ದಾಳೆ. ನವರಾತ್ರಿಯ ಕಾತ್ಯಾಯಿನಿ ದಿನ ಕಮಲ ಅರಳಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆಯಿತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಗೆಲುವಾಗಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಜನತೆಗೆ ಧನ್ಯವಾದಗಳು ಎಂದು ಮೋದಿ ಹೇಳಿದ್ದಾರೆ.