ರಾಯಚೂರು: ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರಸಿದ ಆರೋಪ ಕೇಳಿಬಂದಿದೆ. ಅದೃಷ್ಟವಶಾತ್ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.
ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ತವಗಾ ಗ್ರಾಮದಲ್ಲಿ ಘಟನೆ ನಡೆದಿದೆ.
ನಿನ್ನೆ ಇಡೀ ಗ್ರಾಮಕ್ಕೆ ವಾಟರ್ ಮ್ಯಾನ್ ಆದಪ್ಪ ನೀರು ಸರಬರಾಜು ಮಾಡಿದ್ದರು. ಈ ವೇಳೆ ಕುಡಿಯುವ ನೀರಿನಲ್ಲಿ ನೊರೆ, ದುರ್ವಾಸನೆ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಸ್ಥರು ಕುಡಿಯುವ ನೀರಿನ ಟ್ಯಾಂಕ್ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳು ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ಟ್ಯಾಂಕ್ ನಲ್ಲಿದ್ದ ನೀರನ್ನು ಗ್ರಾಮಸ್ಥರು ಖಾಲಿ ಮಾಡಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮದ ಜನರಿಗೆ ಕುಡಿಯುವ ನೀರಿಗಾಗಿ ಪರ್ಯಾಯ ವ್ಯಸವ್ಥೆ ಮಾಡಿದ್ದು, ಆದಪ್ಪ ದೂರಿನ ಮೇರೆಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.