ತೆಲಂಗಾಣ ಸಚಿವೆ ಕೊಂಡಾ ಸುರೇಖಾ ವಿರುದ್ಧ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕುಟುಂಬದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ನಾಗಾರ್ಜುನ ನಾಂಪಲ್ಲಿ ನ್ಯಾಯಾಲಯದಲ್ಲಿ ಸಚಿವೆ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಮಂತಾ – ನಾಗಚೈತನ್ಯ ವಿಚ್ಛೇದನ ಬಗ್ಗೆ ಸಚಿವೆ ಕೊಂಡಾ ಸುರೇಖಾ ವಿವಾದಿತ ಹೇಳಿಕೆ ನೀಡಿದ್ದರು.
ನಾಗಾರ್ಜುನ ಮಾಲಿಕತ್ವದ ಎನ್ ಕನ್ವೆನ್ಷನ್ ಸೆಂಟರ್ ನೆಲಸಮಗೊಳಿಸುವುದು ಬೇಡವೆನ್ನುವುದಾದರೆ ತನ್ನ ಬಳಿ ಸಮಂತಾ ಅವರನ್ನು ಕಳಿಸುವಂತೆ ತೆಲಂಗಾಣ ಮಾಜಿ ಸಚಿವ ಕೆ.ಟಿ. ರಾಮರಾವ್ ಬೇಡಿಕೆ ಇಟ್ಟಿದ್ದರು. ರಾಮರಾವ್ ಬಳಿ ಹೋಗುವಂತೆ ಸಮಂತಾಗೆ ನಾಗಚೈತನ್ಯ ಅವರ ತಂದೆ ನಟ ನಾಗಾರ್ಜುನ ಬಲವಂತ ಮಾಡಿದ್ದರು. ಆದರೆ, ಆಕೆ ಅದನ್ನು ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನಕ್ಕೆ ಕಾರಣವಾಯಿತು ಎಂದು ಕೊಂಡಾ ಸುರೇಖಾ ಆರೋಪಿಸಿದ್ದರು.
ಅವರ ಆಘಾತಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆಯನ್ನು ನಾಗಾರ್ಜುನ ದಾಖಲಿಸಿದ್ದಾರೆ. ಕೆಟಿಆರ್ ಹಸ್ತಕ್ಷೇಪದಿಂದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ಸಂಬಂಧದಲ್ಲಿ ಬಿರುಕು ಉಂಟಾಗಿ ವಿಚ್ಛೇದನಕ್ಕೆ ಕಾರಣವಾಯಿತು ಎಂಬ ಸಚಿವೆ ಆರೋಪದಿಂದ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ಆಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನಾಗಾರ್ಜುನ ಅವರು ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಇದೀಗ ಸುರೇಖಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.