ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರ ಪಿಎಂ ಇ-ಡ್ರೈವ್ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ ಸಬ್ಸಿಡಿ ನೀಡಲಾಗುವುದು.
ಪ್ರತಿ ಕಿಲೋ ವಾಟ್ ಗೆ 5000 ರೂ. ನಿಗದಿಪಡಿಸಿದ್ದು, ಮೊದಲು ವರ್ಷದಲ್ಲಿ ಗರಿಷ್ಠ 10,000 ರೂ. ಸಬ್ಸಿಡಿ ದೊರೆಯಲಿದೆ. ಎರಡನೇ ವರ್ಷದಲ್ಲಿ ಪ್ರತಿ ಕಿಲೋ ವಾಟ್ ಗೆ 2500 ರೂ. ಪಾವತಿಸಲಾಗುವುದು. ಸಬ್ಸಿಡಿ ಮೊತ್ತ 5000 ರೂ. ದಾಟುವಂತಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.
ಇ- ಆಟೋರಿಕ್ಷಾ ಸೇರಿ ತ್ರಿಚಕ್ರ ವಾಹನಗಳಿಗೆ ಮೊದಲ ವರ್ಷ 25 ಸಾವಿರ ರೂ., ಎರಡನೇ ವರ್ಷದಲ್ಲಿ 12500 ರೂ.ಸಬ್ಸಿಡಿ ಸಿಗಲಿದೆ.
ಎಲ್5 ವರ್ಗಕ್ಕೆ ಸೇರಿದ ಸರಕು ಸಾಗಣೆ ತ್ರಿಚಕ್ರ ವಾಹನಗಳಿಗೆ ಪ್ರಥಮ ವರ್ಷ 50,000 ರೂ., ಎರಡನೇ ವರ್ಷ 25 ಸಾವಿರ ರೂಪಾಯಿ ಸಬ್ಸಿಡಿ ಸಿಗಲಿದೆ ಎಂದು ಹೇಳಲಾಗಿದೆ.
PM ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ(PM ಇ-ಡ್ರೈವ್) ಎಲೆಕ್ಟ್ರಿಕ್ ವಾಹನ ಸಬ್ಸಿಡಿ ಯೋಜನೆಯು ಅಕ್ಟೋಬರ್ 1 ರಂದು ಪ್ರಾರಂಭವಾಗಿದೆ. PM ಇ-ಡ್ರೈವ್ ಯೋಜನೆಯು ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್‌ಗಳ(EVPCS) ಸ್ಥಾಪನೆಯನ್ನು ಉತ್ತೇಜಿಸುವುದಾಗಿದೆ. ಹೊಸ ಯೋಜನೆಯು ಎರಡು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂ. ವೆಚ್ಚ ಹೊಂದಿದೆ. ಮಾರ್ಚ್ 31, 2026 ರವರೆಗೆ ಮಾನ್ಯವಾಗಿರುತ್ತದೆ.