ಅಕ್ಟೋಬರ್ 3 ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ ಅರಮನೆ ಮುಂಭಾಗ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ ತಿಳಿಸಿದ್ದಾರೆ.
ಅರಮನೆ ವೇದಿಕೆಯಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 10ರ ವರೆಗೆ ಹಾಗೂ ಜಗನ್ಮೋಹನ ಅರಮನೆ, ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ಆವರಣ ಸೇರಿದಂತೆ ಮೊದಲಾದ ವೇದಿಕೆಗಳಲ್ಲಿ ಅಕ್ಟೋಬರ್ 11ರ ವರೆಗೆ ಸಂಗೀತ, ನೃತ್ಯ, ನಾಟಕ, ಪೌರಾಣಿಕ, ರಂಗಭೂಮಿ ಮೊದಲಾದ ಕಲಾಪ್ರಕಾರಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
ಅಕ್ಟೋಬರ್ 3 ರಿಂದ 12ರ ವರೆಗೆ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 508 ಕಲಾತಂಡಗಳ 6,500 ಕಲಾವಿದರಿಗೆ ವಿವಿಧ 11 ವೇದಿಕೆಗಳಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಂಗೀತ ಕ್ಷೇತ್ರದ ಖ್ಯಾತನಾಮರನ್ನು ಈ ಬಾರಿಯ ಯುವ ದಸರಾಗೆ ಆಹ್ವಾನಿಸಿದ್ದು, ಬಹಳ ಮಂದಿ ಸೇರುವ ಸಾಧ್ಯತೆ ಇರುವುದರಿಂದ ಮೈಸೂರಿನ ಉತ್ತನಹಳ್ಳಿ ಬಳಿಯ 80 ಎಕರೆ ವಿಶಾಲವಾದ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಭದ್ರತೆ ಹಾಗೂ ವಿಶೇಷ ಬಸ್ ಕಾರ್ಯಾಚರಣೆಗೂ ಸೂಚಿಸಿದ್ದೇನೆ. ಮುಂಜಾಗ್ರತಾ ಕ್ರಮ ವಹಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.