ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ತೊಂದರೆ ಬಹಳ ಸಾಮಾನ್ಯವೆನಿಸಿದೆ. ಬಹುತೇಕ ಎಲ್ಲರೂ ಈ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳಿಗೆ ಪ್ರಮುಖ ಕಾರಣ ನಮ್ಮ ಕೆಲವೊಂದು ಅಭ್ಯಾಸಗಳು ಅಥವಾ ತಪ್ಪುಗಳು. ಗ್ಯಾಸ್‌ನಿಂದ ತೊಂದರೆಯಾದ ತಕ್ಷಣ ಔಷಧಗಳನ್ನೂ ಸೇವಿಸುವ ಬದಲು ಈ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು.
ಆಗಾಗ ತಿನ್ನುವ ಅಭ್ಯಾಸ
ಕೆಲವರಿಗೆ ದಿನವಿಡೀ ಏನನ್ನಾದರೂ ತಿನ್ನುತ್ತಲೇ ಇರುವ ಅಭ್ಯಾಸವಿರುತ್ತದೆ. ಇದು ಗ್ಯಾಸ್ಟ್ರಿಕ್‌ಗೆ ಕಾರಣವಾಗಬಹುದು. ಹೆಚ್ಚು ಸಮಯ ಆಹಾರ ಮತ್ತು ಪಾನೀಯಗಳನ್ನು ತೆಗೆದುಕೊಂಡರೆ ಹೆಚ್ಚು ಗಾಳಿ ನಮ್ಮ ಹೊಟ್ಟೆಗೆ ಹೋಗುತ್ತದೆ. ಇದು ಗ್ಯಾಸ್ ಮತ್ತು ಉಬ್ಬರಿಸುವಿಕೆ ಎರಡನ್ನೂ ಉಂಟುಮಾಡುತ್ತದೆ. ಆದ್ದರಿಂದ ಆಹಾರ ಪದ್ಧತಿಯನ್ನು ಬದಲಾಯಿಸಿ.
ಧೂಮಪಾನ
ಧೂಮಪಾನ ಚಟ ಕೂಡ ಅಸಿಡಿಟಿ ಮತ್ತು ಗ್ಯಾಸ್‌ಗೆ ಕಾರಣವಾಗಬಹುದು. ಧೂಮಪಾನ ಮಾಡುವಾಗ ಹೊರಗಿನ ಗಾಳಿಯು ಹೊಟ್ಟೆಯನ್ನು ಪ್ರವೇಶಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಹೊಟ್ಟೆ ಊದಿಕೊಳ್ಳುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಸೋಡಾ, ಬಿಯರ್ ಮತ್ತು ತಂಪು ಪಾನೀಯ ಸೇವನೆ
ಆಗಾಗ ಸೋಡಾ, ತಂಪು ಪಾನೀಯಗಳು ಅಥವಾ ಬಿಯರ್ ಕುಡಿಯುವ ಅಭ್ಯಾಸವಿದ್ದರೆ ಗ್ಯಾಸ್ ಮತ್ತು ಅಸಿಡಿಟಿಯ ಉಂಟಾಗುತ್ತದೆ. ಏಕೆಂದರೆ ಕಾರ್ಬೊನೇಟೆಡ್ ಉತ್ಪನ್ನಗಳು ಹೊಟ್ಟೆಯನ್ನು ಅನಿಲದಿಂದ ತುಂಬಿಸುತ್ತವೆ, ಇದು ಹೊಟ್ಟೆ ಉಬ್ಬುವಂತೆ ಮಾಡುತ್ತದೆ.
ಚೂಯಿಂಗ್ ಗಮ್
ಚೂಯಿಂಗ್ ಗಮ್ ತಿನ್ನುವುದರಿಂದ ಕೂಡ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ಚೂಯಿಂಗ್ ಗಮ್ ಅನ್ನು ಅಗಿಯುವಾಗ ಗಾಳಿಯು ಹೊಟ್ಟೆಯನ್ನು ಪ್ರವೇಶಿಸುತ್ತದೆ ಮತ್ತು ಹೊಟ್ಟೆ ಊದಿಕೊಳ್ಳುತ್ತದೆ. ನಂತರ ಹೊಟ್ಟೆ ನೋವು ಕೂಡ ಪ್ರಾರಂಭವಾಗುತ್ತದೆ.
ಕುಳಿತೇ ಇರುವುದು
ಅನೇಕರು ದಿನವಿಡೀ ಕುಳಿತೇ ಇರುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಈ ಅಭ್ಯಾಸ ಕೂಡ ಗ್ಯಾಸ್ ಮತ್ತು ಅಸಿಡಿಟಿಗೆ ಕಾರಣವಾಗಬಹುದು. ಆಗಾಗ ಎದ್ದು ತಿರುಗಾಡದೇ ಇದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಜೊತೆಗೆ ಬಹಳಷ್ಟು ರೀತಿಯ ತೊಂದರೆ ಆಗುತ್ತದೆ. ಆದ್ದರಿಂದ ಪ್ರತಿದಿನ ವಾಕಿಂಗ್ ಮತ್ತು ಲಘು ವ್ಯಾಯಾಮ ಮಾಡಿ.