alex Certify ಈ ಬೆಳೆಗಳ ಬಿತ್ತನೆ ಬಗ್ಗೆ ‘ಕೃಷಿ ಇಲಾಖೆ’ಯಿಂದ ರೈತರಿಗೆ ಮಹತ್ವದ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೆಳೆಗಳ ಬಿತ್ತನೆ ಬಗ್ಗೆ ‘ಕೃಷಿ ಇಲಾಖೆ’ಯಿಂದ ರೈತರಿಗೆ ಮಹತ್ವದ ಸಲಹೆ

ಧಾರವಾಡ : ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಪ್ರಾರಂಭವಾಗುವ ಹಂತದಲ್ಲಿದ್ದು, ಮುಖ್ಯ ಬೆಳೆಗಳಾದ ಕಡಲೆ, ಜೋಳ, ಗೋಧಿ ಹಾಗೂ ಕುಸುಬೆ ಬಿತ್ತಲು ರೈತ ಬಾಂಧವರು ಸೂಕ್ತ ಕ್ರಮ ವಹಿಸುವುದು ಉತ್ತಮವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಲೆ: ಪ್ರತಿ ಕಿ.ಗ್ರಾಂ ಬೀಜಕ್ಕೆ 4 ಮಿ. ಲೀ ರೈಝೋಬಿಯಂ ಎಸ್.ಬಿ 120 ಮತ್ತು 4 ಮಿ. ಲೀ ರಂಜಕ ಕರಗಿಸುವ ಜೈವಿಕ ಗೊಬ್ಬರ ಬಿತ್ತನೆ ಮಾಡುವಾಗ ಬೀಜಕ್ಕೆ ಉಪಚರಿಸುವುದು. ಬಿತ್ತನೆಗೆ ಮೊದಲು ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು ಶೇ. 2 ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 30 ನಿಮಿಷ ಅಥವಾ ಶೇ. 25 ರ ಗೋಮೂತ್ರದಲ್ಲಿ 8 ಗಂಟೆಗಳ ಕಾಲ ನೆನೆಸಿ, ಕನಿಷ್ಠ 7 ಘಂಟೆ ನೆರಳಿನಲ್ಲಿ ಒಣಗಿಸಿ ಬೀಜವನ್ನು ಕಠಿಣಗೊಳಿಸಿ ನಂತರ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಅಣುಜೀವಿಯಿಂದ ಉಪಚರಿಸಬೇಕು. ಅಲ್ಲದೇ, ಬಿತ್ತನೆಯ ಸಮಯದಲ್ಲಿ ಎಕರೆಗೆ 8 ಕಿ. ಗ್ರಾಂ ಮೈಕೊರೈಜಾ ಜೈವಿಕಗೊಬ್ಬರವನ್ನು 200 ಕಿ.ಗ್ರಾಂ ಎರೆಹುಳು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಬಿತ್ತನೆಯ ಸಾಲಿನ ಮಣ್ಣಿನಲ್ಲಿ ಹಾಕಿ ಬೆರೆಸಬೇಕು.

ಕಡಲೆಯಲ್ಲಿ ನಟೆ ರೋಗ, ಸಿಡಿ ರೋಗ, ಸೊರಗು ರೋಗ ತಡೆಗಟ್ಟಲು ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಕ್ಯಾಪ್ಟಾನ್ 80 ಡಬ್ಲೂ.ಪಿ ಅಥವಾ ಥೈರಾಮ್ 75 ಡಬ್ಲೂ.ಪಿ ಅಥವಾ ಮೆಂಕೋಜೆಬ್ 75 ಡಬ್ಲೂ.ಪಿ ಅಥವಾ 3.5 ಗ್ರಾಂ (ಕಾರ್ಬನಡೈಜಿಮ್ + ಮ್ಯಾಂಕೋಜೆಬ್) ಅಥವಾ 4 ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರದಿಂದ ಬೀಜೋಪಚಾರ ಮಾಡಬೇಕು.

ಗೋದಿ: ಎಕರೆಗೆ ಬೇಕಾಗುವ ಬಿತ್ತನೆ ಬೀಜವನ್ನು ದ್ರವ ರೂಪದ 80 ಮಿ.ಲೀ ಅಝೋಸ್ಫಿರಿಲಂ ಹಾಗೂ 80 ಮಿ.ಲೀ ದ್ರವ ರೂಪದ ರಂಜಕ ಕರಗಿಸುವ ಜೈವಿಕ ಗೊಬ್ಬರದಿಂದ ಉಪಚರಿಸಿ. ಬಿತ್ತನೆ ಮಾಡುವ ಮೊದಲು ರಸಗೊಬ್ಬರಗಳೆಲ್ಲವನ್ನೂ 6-8 ಸೆಂ.ಮೀ ಆಳದ ಸಾಲುಗಳಲ್ಲಿ ಮಣ್ಣಿನಲ್ಲಿ ಬೆರೆಸಿ, 23 ಸೆಂ.ಮೀ ಅಂತರದ ಸಾಲಿನಲ್ಲಿ ಬಿತ್ತನೆ ಮಾಡಬೇಕು. ಅಲ್ಲದೇ, ಬಿತ್ತನೆಯ ಸಮಯದಲ್ಲಿ ಎಕರೆಗೆ 8 ಕಿ.ಗ್ರಾಂ ಮೈಕೋರೈಜಾ ಜೈವಿಕ ಗೊಬ್ಬರವನ್ನು 200 ಕಿ.ಗ್ರಾಂ ಎರೆಹುಳು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಬಿತ್ತನೆಯ ಸಾಲಿನ ಮಣ್ಣಿನಲ್ಲಿ ಹಾಕಿ ಬೆರೆಸಬೇಕು.

*ಜೋಳ:*ಪ್ರತಿ ಕಿ.ಗ್ರಾಂ ಬೀಜಕ್ಕೆ ಕನಿಷ್ಠ 4 ಮಿ.ಲೀ ಅಝೋಸ್ಫಿರಿಲಂ ಮತ್ತು 4 ಮಿ.ಲೀ ದ್ರವ ರೂಪದ ರಂಜಕ ಕರಗಿಸುವ ಜೈವಿಕ ಗೊಬ್ಬರ ಬಿತ್ತನೆ ಮಾಡುವಾಗ ಬೀಜಕ್ಕೆ ಉಪಚರಿಸಬೇಕು. ಬೀಜೋಪಚಾರದ ಪೂರ್ವದಲ್ಲಿ ಪ್ರತಿ ಕಿ.ಗ್ರಾಂ ಬೀಜವನ್ನು 1.5 ಲೀ ನೀರಿನಲ್ಲಿ 30 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಅಥವಾ 7.5 ಗ್ರಾಂ ಪೊಟ್ಯಾಷಿಯಂ ನೈಟ್ರೇಟ್ ಬೆರೆಸಿದ ಅಥವಾ ಗೋಮೂತ್ರ (ಶೇ. 25) ಬೆರೆಸಿದ ದ್ರಾವಣದಲ್ಲಿ 8 ಘಂಟೆಗಳ ಕಾಲ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸುವುದು.

ಕುಸುಬೆ: ಬಿತ್ತುವ ಪೂರ್ವದಲ್ಲಿ ಬೀಜವನ್ನು ಶೇ. 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ (1.0 ಲೀ ನೀರಿನಲ್ಲಿ 20 ಗ್ರಾಮ ಕ್ಯಾಲ್ಸಿಯಂ ಕ್ಲೋರೈಡ್) 12 ಘಂಟೆಗಳ ಕಾಲ ನೆನೆಸಿ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಪ್ರಮಾಣ ಅಧಿಕವಗುವುದು. ನಂತರ ಪ್ರತಿ ಎಕರೆಗೆ ಬೇಕಾಗುವ ಬಿತ್ತನೆ ಬೀಜವನ್ನು 200 ಗ್ರಾಂ ಅಝೋಸ್ಫಿರಿಲಂ ಜೀವಾಣುವಿನಿಂದ ಉಪಚರಿಸಿ ಬಿತ್ತಬೇಕು. ಮತ್ತು ಸತುವಿನ ಸಲ್ಪೇಟ್ 6 ಕಿ.ಗ್ರಾಂ ಅನ್ನು ಬಿತ್ತುವಾಗ ಪುಡಿ ಮಾಡಿದ ಕೊಟ್ಟಿಗೆ ಗೊಬ್ಬರದ ಜೊತೆಗೆ ಸಮಪ್ರಮಾಣದಲ್ಲಿ ಬೆರೆಸಿ ಪ್ರತ್ಯೇಕವಾದ ಎಳೆಶಡ್ಡಿ ಮುಖಾಂತರ ಮಣ್ಣಿನಲ್ಲಿ ಬೆರೆಸಬೇಕು.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...