ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ವತಿಯಿಂದ ‘ಮುಖ್ಯಮಂತ್ರಿಗಳ ಆಪತ್ಕಾಲಾಯನ ಸೇವೆ’ಯ ನೂತನ 65 ಆಂಬುಲೆನ್ಸ್ ಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಪೂರ್ವದ್ವಾರ ಮೆಟ್ಟಿಲುಗಳ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಗಳ ಆಪತ್ಕಾಲಾಯಾನ ಸೇವೆ ಆಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ರಸ್ತೆ ಅಪಘಾತದ ಗಾಯಾಳುಗಳಿಗೆ ಸುವರ್ಣ ಸಮಯಾವಧಿಯಲ್ಲಿ(Golden Hour) ಚಿಕಿತ್ಸೆಗೆ ನೆರವಾಗಲು ನೂತನ 65 ಆಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.
ಅಪಘಾತಗಳ ನಿಯಂತ್ರಣ ಹಾಗೂ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿಧಿಯಿಂದ 2024- 25 ನೇ ಸಾಲಿನಲ್ಲಿ 45 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗೃಹ, ಸಾರಿಗೆ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಶಿಕ್ಷಣ ಇಲಾಖೆ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸಮೀಪದಲ್ಲಿರುವ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಗಳನ್ನು ನಿಯೋಜಿಸಲಾಗುತ್ತದೆ.
ತುರ್ತು ಸೇವೆ ಹಾಗೂ ಚಿಕಿತ್ಸೆ ಒದಗಿಸಲು ಅಗತ್ಯ ವೈದ್ಯಕೀಯ ಸಲಹೆಗಳನ್ನು ಒಳಗೊಂಡ ಆಂಬುಲೆನ್ಸ್ ಸೇವೆಯು ಸಂಪೂರ್ಣ ಉಚಿತವಾಗಿರುತ್ತದೆ.