ಬೆಂಗಳೂರು: ಅಡುಗೆ ಎಣ್ಣೆ ದರ ದಿಢೀರ್ ಏರಿಕೆ ಕಂಡಿದೆ. ದಸರಾ, ದೀಪಾವಳಿ ಹಬ್ಬಗಳು ಸಮೀಪಿಸಿಸುತ್ತಿರುವಂತೆ ಗ್ರಾಹಕರಿಗೆ ಅಡುಗೆ ಎಣ್ಣೆ ದರ ಏರಿಕೆಯಾಗಿರುವುದು ಮತ್ತಷ್ಟು ಹೊರೆಯಾಗಲಿದೆ.
ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಆಮದು ಸುಂಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡಿರುವುದರಿಂದ ಕಳೆದ ಒಂದು ವಾರದಿಂದ ಅಡುಗೆ ಎಣ್ಣೆ ದರ ಹೆಚ್ಚಳವಾಗಿದೆ. ಸೂರ್ಯಕಾಂತಿ ಎಣ್ಣೆ ಒಂದು ಲೀಟರ್ ಗೆ ಸಗಟು ದರದಲ್ಲಿ 10 ರಿಂದ 15 ರೂಪಾಯಿ ಏರಿಕೆಯಾಗಿದ್ದು, ತಾಳೆ ಎಣ್ಣೆ ದರ ಒಂದು ಲೀಟರ್ ಗೆ 20 ರಿಂದ 21 ರೂಪಾಯಿವರೆಗೆ ಹೆಚ್ಚಳವಾಗಿದೆ.
ಆಮದು ಸುಂಕ ಹೆಚ್ಚಳ ಮಾಡಿರುವುದರಿಂದ ಸೂರ್ಯಕಾಂತಿ ಎಣ್ಣೆಗೆ ಶೇಕಡ 20ರಷ್ಟು ಆಮದು ಶುಲ್ಕ ಹೆಚ್ಚಾಗಿದೆ. ತಾಳೆ ಎಣ್ಣೆಗೆ ಶೇಕಡ 37ರಷ್ಟು ಏರಿಕೆಯಾಗಿದೆ.
ಪ್ರತಿ ಲೀಟರ್ ಸೂರ್ಯಕಾಂತಿ ಎಣ್ಣೆ ಕಳೆದ ವಾರ 110 ರಿಂದ 118 ರೂ. ಇತ್ತು. ಇದೀಗ 120 ರಿಂದ 124 ರೂ.ಗೆ ಏರಿಕೆಯಾಗಿದೆ. 96 ರೂಪಾಯಿ ಇದ್ದ ತಾಳೆ ಎಣ್ಣೆ ದರ 117.50ರೂ. ಗೆ ತಲುಪಿದೆ. ಕೇಂದ್ರ ಸರ್ಕಾರ ಅಡುಗೆ ಎಣ್ಣೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಿದ್ದು, ಈ ನಡುವೆ ಆಮದು ಸುಂಕ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.