ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಉದ್ಯೋಗ ಅಕಾಂಕ್ಷಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ಗ್ರೂಪ್ ಬಿ ವೃಂದದ 1,300ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿದೆ.
ಕೃಷಿ ಇಲಾಖೆಯ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಹಾಗೂ ವಿವಿಧ ಇಲಾಖೆಗಳ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಕೃಷಿ ಇಲಾಖೆಯ ಹೈದರಾಬಾದ್ ಕರ್ನಾಟಕ ವೃಂದದ 42 ಕೃಷಿ ಅಧಿಕಾರಿ, 231 ಸಹಾಯಕ ಕೃಷಿ ಅಧಿಕಾರಿ ಮತ್ತು ಊಳಿಕೆ ಮೂಲ ವೃಂದದ 86 ಕೃಷಿ ಅಧಿಕಾರಿ ಮತ್ತು 586 ಸಹಾಯಕ ಕೃಷಿಯ ಅಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 7ರಿಂದ ಅರ್ಜಿ ಸಲ್ಲಿಸಬಹುದಾಗಿದೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಬಿ ಶ್ರೇಣಿಯ ಹೈದರಾಬಾದ್ ಕರ್ನಾಟಕ ವೃಂದದ 50 ಮತ್ತು ಉಳಿಕೆ ಮೂಲ ವೃಂದದ 277 ಹುದ್ದೆಗಳ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ 30 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕರ್ನಾಟಕ ಲೋಕಸೇವಾ ಆಯೋಗದ ವೆಬ್ಸೈಟ್ ನಲ್ಲಿ ಎಲ್ಲಾ ಹುದ್ದೆಗಳ ನೇಮಕಾತಿ ಕುರಿತಾದ ಹೆಚ್ಚಿನ ವಿವರ ಲಭ್ಯವಿದೆ.