ವೈಎಸ್‌ಆರ್‌ಸಿಪಿ ಅವಧಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಅವರ ಆರೋಪದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆಯುವುದಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.
ನಾನೇ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ. ನಾನು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆಯುತ್ತಿದ್ದೇನೆ. ಚಂದ್ರಬಾಬು ನಾಯ್ಡು ಅವರು ಸತ್ಯವನ್ನು ಹೇಗೆ ತಿರುಚಿದ್ದಾರೆ. ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಅವರಿಗೆ ವಿವರಿಸಿ ಬತ್ರೆ ಬರೆಯಲಿದ್ದೇನೆ ಎಂದು ತಿಳಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ನಾಯ್ಡು ಆರೋಪಿಸಿದ್ದರು.
ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದ ಬಗ್ಗೆ ಪ್ರಯೋಗಾಲಯದ ವರದಿಗಳು ನಮಗೆ ಬಂದಿವೆ. ಅದರ ಎಸ್ ಮೌಲ್ಯವನ್ನು ಆಧರಿಸಿದ ನಿರ್ದಿಷ್ಟ ಕೊಬ್ಬು ನಿಗದಿತ ವ್ಯಾಪ್ತಿಯಲ್ಲಿಲ್ಲ ಮತ್ತು ಹಾಲಿನ ಕೊಬ್ಬು ಅಲ್ಲ, ಅದು ತುಪ್ಪ ಅಲ್ಲ ಎಂದು ಎರಡೂ ವರದಿಗಳು ಸ್ಪಷ್ಟವಾಗಿ ಹೇಳಿವೆ. ಇದು ಸಸ್ಯಜನ್ಯ ಎಣ್ಣೆಗಳ ಮಿಶ್ರಣವಾಗಿದೆ, ಮತ್ತು ಆಘಾತಕಾರಿ, ಗೋಮಾಂಸ ಕೊಬ್ಬು ಮತ್ತು ಹಂದಿಯ ಕೊಬ್ಬಿನ ಮಿಶ್ರಣವಾಗಿದೆ ಎಂದು ಟಿಡಿಪಿ ನಾಯಕ ಶ್ರೀಭರತ್ ಮತುಕುಮಿಲ್ಲಿ ಹೇಳಿದ್ದಾರೆ.
ನಾಯ್ಡು ಅವರ ಆರೋಪವನ್ನು ತಳ್ಳಿಹಾಕಿದ ಜಗನ್ ಮೋಹನ್ ರೆಡ್ಡಿ, ಇದು ದಿಕ್ಕು ತಪ್ಪಿಸುವ ರಾಜಕೀಯ, ಒಂದೆಡೆ, ಚಂದ್ರಬಾಬು ನಾಯ್ಡು ಅವರ 100 ದಿನಗಳ ಆಡಳಿತದ ಬಗ್ಗೆ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಗಮನವನ್ನು ಬೇರೆಡೆಗೆ ತಿರುಗಿಸುವ ಸಲುವಾಗಿ, ಈ ಕಥೆಯನ್ನು ಹೆಣೆಯಲಾಗಿದೆ ಎಂದು ದೂರಿದ್ದಾರೆ.
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ತಿರುಪತಿ ದೇವಸ್ಥಾನದ ‘ಪ್ರಸಾದ’ದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿರುವ ಆರೋಪ ಕೇಳಿ ತೀವ್ರ ವಿಚಲಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.