ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಜಾಲದ ಬೇರುಗಳನ್ನೇ ಕತ್ತರಿಸಲು ತೀರ್ಮಾನ ಮಾಡಿದ್ದೇವೆ. ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ. ಇದಕ್ಕಾಗಿ ಇನ್ನಷ್ಟು ಕಠಿಣ, ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಮೇಲಿಂದ ಮೇಲೆ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ. ಟಾಸ್ಕ್ ಫೋರ್ಸ್‌ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇರುತ್ತಾರೆ.
ಸಮಾಜವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಾದಕ ದ್ರವ್ಯ ಪಿಡುಗಿಗೆ ಕೊನೆಹಾಡುವ ಸಂಕಲ್ಪದೊಂದಿಗೆ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಹಲವು ಸಚಿವರನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಿ, ಆದೇಶ ಹೊರಡಿಸಲಾಗಿದೆ.
ಡ್ರಗ್ಸ್ ಹಾವಳಿ ನಿರ್ಮೂಲನೆಯ ಹೊಣೆ ಕೇವಲ ನಮ್ಮೊಬ್ಬರದ್ದಲ್ಲ, ಇದು ಸಮುದಾಯಿಕ ಜವಾಬ್ದಾರಿ. ಡ್ರಗ್ಸ್ ಮಾರಾಟ ಮತ್ತು ಸೇವನೆ ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ನಾವು – ನೀವು ಜೊತೆಗೂಡಿ ಡ್ರಗ್ಸ್ ಮುಕ್ತ – ಸ್ವಸ್ಥ ಕರ್ನಾಟಕ ನಿರ್ಮಿಸೋಣ ಎಂದು ಸಿಎಂ ತಿಳಿಸಿದ್ದಾರೆ.