ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರದ ಖಾಸಗಿ ವಸತಿ ಶಾಲೆಯಲ್ಲಿ ಪರೀಕ್ಷೆ ಬರೆಯುವ ವೇಳೆ ಸುಸ್ತಾಗಿ ಕುಸಿದು ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಬಾಲಕನ ಸಾವಿಗೆ ಶಿಕ್ಷಕರ ನಿರ್ಲಕ್ಷವೇ ಕಾರಣವೆಂದು ಆರೋಪಿಸಿ ಪೋಷಕರು ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚೇತನ್(16) ಮೃತಪಟ್ಟ ವಿದ್ಯಾರ್ಥಿ. ಡಿಡಿಯು ಖಾಸಗಿ ಕನ್ನಡ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಚೇತನ್ ಆರೋಗ್ಯ ಸರಿಯಿಲ್ಲದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಇಂದು ಶಾಲೆಯಲ್ಲಿ ಕಿರುಪರೀಕ್ಷೆ ಇದೆ ಎಂದು ಚೇತನ್ ಶಾಲೆಗೆ ಬಂದಿದ್ದಾನೆ. ಪರೀಕ್ಷೆ ಬರೆಯುವಾಗಲೇ ಸುಸ್ತಾಗಿ ವಾಂತಿ ಮಾಡಿಕೊಂಡಿದ್ದು, ಹೊರಗೆ ಕಳುಹಿಸದ ಶಿಕ್ಷಕರು ಶಾಲೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆ. ಅದೇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಸಹೋದರರಿಯನ್ನು ಕರೆದ ಚೇತನ್ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ಹೇಳಿದ್ದಾನೆ.
ಆದರೆ. ಮುಖ್ಯ ಶಿಕ್ಷಕರ ಅನುಮತಿ ಇಲ್ಲದ ಕಾರಣ ಫೋನ್ ಕೊಡುವುದಿಲ್ಲ ಎಂದು ಶಿಕ್ಷಕರು ಹೇಳಿದ್ದು, ಆಸ್ಪತ್ರೆಗೂ ಕಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಿತ್ರಾಣಗೊಂಡು ಚೇತನ್ ಶಾಲೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ನಂತರ ಬೈಕ್ ಮೇಲೆ ಸಹಪಾಠಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆಗಾಗಲೇ ಚೇತನ್ ಮೃತಪಟ್ಟಿದ್ದ ಎನ್ನಲಾಗಿದೆ.