ಸಾಕುಪ್ರಾಣಿಗಳೆಂದ್ರೆ ಯಾರಿಗಿಷ್ಟವಿಲ್ಲ ಹೇಳಿ ? ಬೆಕ್ಕು, ನಾಯಿ, ಮೊಲ, ಹಸು ಹೀಗೆ ಅನೇಕ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ ಈ ಸಾಕು ಪ್ರಾಣಿಗಳು ನಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುತ್ತವೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ಇತ್ತೀಚಿನ ಸಂಶೋಧನೆಗಳ ಪ್ರಕಾರ ನಾವು ಬೆಕ್ಕು ಅಥವಾ ನಾಯಿ ಇವುಗಳಲ್ಲಿ ಯಾವುದನ್ನು ಇಷ್ಟಪಡುತ್ತೇವೆಯೋ ನಮ್ಮ ವ್ಯಕ್ತಿತ್ವ ಕೂಡ ಅದಕ್ಕೆ ತಕ್ಕಂತಿರುತ್ತದೆ. ಅಧ್ಯಯನದ ಪ್ರಕಾರ ಬೆಕ್ಕುಗಳನ್ನು ಇಷ್ಟಪಡುವವರು ಬೆಕ್ಕುಗಳಂತೆ ಹೆಚ್ಚು ಸೃಜನಶೀಲರಾಗಿರುತ್ತಾರೆ. ನಾಯಿಪ್ರಿಯರು ಶ್ವಾನಗಳಂತೆಯೇ ಶಿಸ್ತು ಮತ್ತು ಹೆಚ್ಚು ಸಂಘಟಿತರಾಗಿರಲು ಇಷ್ಟಪಡುತ್ತಾರೆ.
ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ 4655 ಜನರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಬೆಕ್ಕುಗಳನ್ನು ಇಷ್ಟಪಡುವ ಜನರು ಸಾಮಾನ್ಯವಾಗಿ ಮುಕ್ತ ಮನಸ್ಸಿನವರು, ಸೃಜನಶೀಲರು ಮತ್ತು ಮುಕ್ತವಾಗಿ ಯೋಚಿಸುತ್ತಾರೆ. ನಾಯಿಗಳನ್ನು ಇಷ್ಟಪಡುವ ಜನರು ಹೆಚ್ಚು ಶಿಸ್ತು, ಸಾಮಾಜಿಕ ಮತ್ತು ಜವಾಬ್ದಾರಿಯುತರು. ಸಾಕುಪ್ರಾಣಿಗಳ ಸ್ವಭಾವ ಮತ್ತು ಅವುಗಳ ಮಾಲೀಕರ ಜೀವನಶೈಲಿಯಲ್ಲಿಯೂ ಈ ವ್ಯತ್ಯಾಸವು ಗೋಚರಿಸುತ್ತದೆ.
ಬೆಕ್ಕುಪ್ರಿಯರು ಸೃಜನಶೀಲರು
ಸೃಜನಶೀಲ ಜನರು ಸಾಮಾನ್ಯವಾಗಿ ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಬೆಕ್ಕುಗಳು ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುತ್ತವೆ, ಸ್ವತಂತ್ರ ಸ್ವಭಾವವನ್ನು ಹೊಂದಿವೆ, ಅವುಗಳು ತಮ್ಮ ಮಾಲೀಕರ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ಹಾಗಾಗಿಯೇ ಸೃಜನಶೀಲ ಜನರು ಬೆಕ್ಕುಗಳ ಸ್ವಾತಂತ್ರ್ಯ ಮತ್ತು ನಿಗೂಢ ಸ್ವಭಾವಕ್ಕೆ ಆಕರ್ಷಿತರಾಗುತ್ತಾರೆ.
ಬೆಕ್ಕುಪ್ರಿಯರು ಆಳವಾದ ಚಿಂತಕರು ಮತ್ತು ಹೊಸ ವಿಷಯಗಳನ್ನು ಅನ್ವೇಷಿಸಲು ಉತ್ಸುಕರಾಗಿರುತ್ತಾರೆ. ಬೆಕ್ಕುಗಳು ತಮ್ಮ ಕೆಲಸದಲ್ಲಿ ಕಳೆದುಹೋಗುವಂತೆ ಮಾಲೀಕರು ಕೂಡ ತಮ್ಮದೇ ಆದ ಜಗತ್ತಿನಲ್ಲಿ ಕಳೆದುಹೋಗಲು ಇಷ್ಟಪಡುತ್ತಾರೆ.”
ನಾಯಿಪ್ರಿಯರು ಶಿಸ್ತಿನ ಸಿಪಾಯಿಗಳು
ನಾಯಿಗಳನ್ನು ಇಷ್ಟಪಡುವ ಜನರು ಹೆಚ್ಚು ಶಿಸ್ತು ಮತ್ತು ಸಂಘಟಿತರಾಗಿರುತ್ತಾರೆ. ನಾಯಿಗಳು ತಮ್ಮ ಮಾಲೀಕರಿಗೆ ನಿಷ್ಠಾವಂತವಾಗಿರುತ್ತವೆ, ಜವಾಬ್ಧಾರಿಯಿಂದ ವರ್ತಿಸುತ್ತವೆ. ಮಾಲೀಕರಿಗಾಗಿ ಸರ್ವ ತ್ಯಾಗಕ್ಕೂ ಸಿದ್ಧವಾಗಿರುತ್ತವೆ. ನಾಯಿಗಳ ಮಾಲೀಕರ ವ್ಯಕ್ತಿತ್ವ ಮತ್ತು ಸ್ವಭಾವ ಕೂಡ ಇದೇ ತೆರನಾಗಿರುತ್ತದೆ.