alex Certify ಪ್ರತ್ಯೇಕ ಕೋಣೆಯಲ್ಲಿ ಮಲಗುವಂತೆ ಪತ್ನಿ ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ; ʼವಿಚ್ಚೇದನʼ ನೀಡಿ ಅಲಹಾಬಾದ್ ಹೈಕೋರ್ಟ್ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತ್ಯೇಕ ಕೋಣೆಯಲ್ಲಿ ಮಲಗುವಂತೆ ಪತ್ನಿ ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ; ʼವಿಚ್ಚೇದನʼ ನೀಡಿ ಅಲಹಾಬಾದ್ ಹೈಕೋರ್ಟ್ ತೀರ್ಪು

ಪತ್ನಿ ತನ್ನ ಪತಿಯೊಂದಿಗೆ ಸಹಬಾಳ್ವೆ ನಡೆಸಲು ನಿರಾಕರಿಸಿದರೆ ಅಥವಾ ಪ್ರತ್ಯೇಕ ಕೋಣೆಯಲ್ಲಿ ವಾಸಿಸುವಂತೆ ಪತಿಯನ್ನು ಒತ್ತಾಯಿಸಿದರೆ ಆಕೆಯ ಈ ನಡೆಯು ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ತೀರ್ಪು ನೀಡಿದೆ.

ಕೌಟುಂಬಿಕ ವಿಚಾರದಲ್ಲಿ ಹೀಗೆ ಮಾಡುವುದರಿಂದ ಪತ್ನಿಯು ತನ್ನ ಗಂಡನ ವೈವಾಹಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಾಳೆ ಎಂದು ನ್ಯಾಯಾಲಯ ಹೇಳಿದೆ. ಈ ಅವಲೋಕನದೊಂದಿಗೆ ನ್ಯಾಯಮೂರ್ತಿ ರಾಜನ್ ರಾಯ್ ಮತ್ತು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರ ವಿಭಾಗೀಯ ಪೀಠವು ಇತ್ತೀಚೆಗೆ ವ್ಯಕ್ತಿಯೋರ್ವ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿ ವಿಚ್ಛೇದನ ನೀಡಿದೆ. ಜೊತೆಗೆ ನವೆಂಬರ್ 23, 2016 ರಂದು ಲಕ್ನೋದಲ್ಲಿ ಜರುಗಿದ್ದ ಅವರ ವಿವಾಹವನ್ನು ನ್ಯಾಯಾಲಯ ವಿಸರ್ಜಿಸಿದೆ.

ತನ್ನ ಪತ್ನಿ ತನಗೆ ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುವಂತೆ ಒತ್ತಾಯಿಸಿದ್ದಲ್ಲದೆ, ಆಕೆಯ ಕೋಣೆಗೆ ಪ್ರವೇಶಿಸಿದರೆ ಆತ್ಮಹತ್ಯೆ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ವ್ಯಕ್ತಿ ದೂರಿದ್ದು ವಿಚ್ಚೇದನ ಕೋರಿದ್ದರು.

ಇದಕ್ಕೂ ಮೊದಲು ಲಕ್ನೋದ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಕೋರಿ ಸಲ್ಲಿಸಿದ್ದ ಅವರ ಮೊಕದ್ದಮೆಯನ್ನು ವಜಾಗೊಳಿಸಿತ್ತು. ನಂತರ ಕೌಟುಂಬಿಕ ನ್ಯಾಯಾಲಯದ ವಜಾ ಆದೇಶವನ್ನು ಪ್ರಶ್ನಿಸಿ ವ್ಯಕ್ತಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ವಿಷಯವನ್ನು ಆಲಿಸಿದ ಪೀಠವು ತೀರ್ಪಿನಲ್ಲಿ, “ಸಹಜೀವನವು ವೈವಾಹಿಕ ಸಂಬಂಧದ ಅತ್ಯಗತ್ಯ ಭಾಗವಾಗಿದೆ. ಆದರೆ ಪತಿಯೊಂದಿಗೆ ಸಹಜೀವನ ನಡೆಸಲು ಹೆಂಡತಿ ನಿರಾಕರಿಸಿ ಪ್ರತ್ಯೇಕ ಕೋಣೆಯಲ್ಲಿ ಪತಿಗೆ ವಾಸಿಸುವಂತೆ ಬಲವಂತ ಮಾಡಿದರೆ ಅದು ವ್ಯಕ್ತಿಯ ವೈವಾಹಿಕ ಹಕ್ಕುಗಳನ್ನು ಕಸಿದುಕೊಂಡಂತೆ. ಇದು ಅವನ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ದೈಹಿಕ ಮತ್ತು ಮಾನಸಿಕ ಕ್ರೌರ್ಯ ಎರಡಕ್ಕೂ ಕಾರಣವಾಗುತ್ತದೆ.” ಎಂದು ನ್ಯಾಯಾಲಯ ಹೇಳಿದೆ.

ವಿಚ್ಛೇದನದ ತೀರ್ಪು ನೀಡುವಾಗ ಕ್ರೌರ್ಯವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಲಯ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...