ಮದುವೆ ಸಂದರ್ಭದಲ್ಲಿ ಪೋಷಕರು ನೀಡಿದ್ದ ಚಿನ್ನಾಭರಣ ಮತ್ತು ಇತರ ವಸ್ತುಗಳ ಸಂಪೂರ್ಣ ಮಾಲೀಕತ್ವವನ್ನು ವಿವಾಹವಾಗಿದ್ದ ಮಗಳೇ ಹೊಂದಿರುತ್ತಾಳೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮ್ಮ ಮಗಳ ವಿಚ್ಛೇದನದ ನಂತರ ಆಕೆಯ ಒಡವೆಗಳನ್ನು ಹಿಂದಿರುಗಿಸುವಂತೆ ಆಕೆಯ ಅತ್ತೆಯನ್ನು ಒತ್ತಾಯಿಸುವ ಅಧಿಕಾರ, ವಿವಾಹಿತ ಮಹಿಳೆಯ ತಂದೆಗೆ ಇರುವುದಿಲ್ಲವೆಂದು ಹೇಳಿದೆ.
ಪ್ರಕರಣದ ಹಿನ್ನೆಲೆಯನ್ನು ಗಮನಿಸಿದರೆ, ಡಿಸೆಂಬರ್ 1999 ರಲ್ಲಿ ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟ ತಂದೆ ಆಕೆ ಮತ್ತು ಅಳಿಯನನ್ನು ಅಮೆರಿಕಾಕ್ಕೆ ಕಳುಹಿಸಿಕೊಟ್ಟಿದ್ದರು. ಮದುವೆಯಾದ 16 ವರ್ಷಗಳ ನಂತರ ಮಗಳು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಫೆಬ್ರವರಿ 2016 ರಲ್ಲಿ ಮಿಸೌರಿಯ ಲೂಯಿಸ್ ಕೌಂಟಿ ಸರ್ಕ್ಯೂಟ್ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯಂತೆ ವಿಚ್ಚೇದನ ನೀಡಲಾಯಿತು. ವಿಚ್ಛೇದನದ ಒಪ್ಪಂದದ ನಂತರ ಎಲ್ಲಾ ಆಸ್ತಿ, ವಸ್ತು ಮತ್ತು ಹಣ, ವ್ಯವಹಾರ ಪ್ರತ್ಯೇಕ ಒಪ್ಪಂದದ ಮೂಲಕ ಇಬ್ಬರ ನಡುವೆ ಇತ್ಯರ್ಥವಾಯಿತು. ತರುವಾಯ ವಿಚ್ಚೇದಿತ ಮಹಿಳೆ ಮೇ 2018 ರಲ್ಲಿ ಮರುಮದುವೆಯಾದರು.
ಅದಾಗ್ಯೂ ಆಕೆಯ ತಂದೆ ಮೂರು ವರ್ಷಗಳ ನಂತರ ಹೈದರಾಬಾದ್‌ನಲ್ಲಿ ತನ್ನ ಮಗಳ ಮಾಜಿ ಅತ್ತೆಯ ವಿರುದ್ಧ ಎಫ್‌ಐಆರ್ ದಾಖಲಿಸಿ ಆಕೆಯ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ ಕೋರಿದರು. ಮಹಿಳೆಯ ಮಾಜಿ ಅತ್ತೆ ಎಫ್‌ಐಆರ್ ರದ್ದುಗೊಳಿಸುವಂತೆ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು, ಅಲ್ಲಿ ವಿಫಲ ಪ್ರಯತ್ನದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದರು.
ಸುಪ್ರೀಂಕೋರ್ಟ್ ನಲ್ಲಿ ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ಪೀಠವು ಮಾಜಿ ಅತ್ತೆಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ತನ್ನ ಮಗಳ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ ತಂದೆಗೆ ಒತ್ತಾಯಿಸುವ ಅವಕಾಶವಿಲ್ಲ ಎಂದು ಹೇಳಿದೆ.
ಮದುವೆಯ ಬಳಿಕ ಇಂತಹ ಸ್ತ್ರೀ ಧನ್ ( ಮದುವೆಯ ವೇಳೆ ನೀಡುವ ವಸ್ತುಗಳು, ಚಿನ್ನಾಭರಣ)ದ ಮೇಲೆ ಮಹಿಳೆಗಷ್ಟೇ ಅಧಿಕಾರವಿರುತ್ತದೆ ಹೊರತು ಆಕೆ ಬದುಕಿರುವಾಗ ಅವಳ ತಂದೆಗಾಗಲೀ ಅಥವಾ ಆಕೆಯ ಗಂಡನಿಗಾಗಲೀ ಹಕ್ಕು ಇರುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಮಗಳು ವಿಚ್ಛೇದನ ಪಡೆದಿದ್ದು, ಮರುಮದುವೆಯಾದ ಮೂರು ವರ್ಷದ ಬಳಿಕ ಇಂತಹ ಕ್ರಿಮಿನಲ್ ಮೊಕದ್ದಮೆಗಳು ದೂರುದಾರರು ದ್ವೇಷವನ್ನು ಹೊಂದಿರುವ ವ್ಯಕ್ತಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಸಾಧನವಲ್ಲ ಎಂದಿದೆ. ಅಷ್ಟೇ ಅಲ್ಲದೇ ಪ್ರಕರಣವನ್ನು ಆಲಿಸಿದ ನ್ಯಾಯಪೀಠ
1999 ರಲ್ಲಿ ತನ್ನ ಮಗಳ ಮದುವೆಯ ಸಮಯದಲ್ಲಿ ತಂದೆ ಯಾವುದೇ ‘ಸ್ತ್ರೀ ಧನ್’ ನೀಡಿದ್ದಕ್ಕೆ ಯಾವುದೇ ಪುರಾವೆಯನ್ನು ಒದಗಿಸಿಲ್ಲ ಮತ್ತು ವಿಚ್ಛೇದನ ವೇಳೆ ವಿವಾಹಿತ ಮಹಿಳೆ ‘ಸ್ತ್ರೀಧನ್’ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.