ಬೆಂಗಳೂರು: ರಾಜ್ಯದ ವಿವಿಧೆಡೆ ಇನ್ನೂ ಒಂದು ವಾರ ಕಾಲ ಭಾರಿ ಮಳೆಯಾಗುವ ಸಂಭವವಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಂದು ವಾರ ಹೆಚ್ಚಿನ ಮಳೆಯಾಗಲಿದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಭಾರಿ ಮಳೆಯಾಗುವ ಸಂಭವ ಇದೆ. 12 ರಿಂದ 20 ಸೆಂ.ಮೀ. ವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಈ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 30, 31ರಂದು ಹಾಸನ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿಯಲ್ಲಿ ಹೆಚ್ಚಿನ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಉಳಿದಂತೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ.
ದಕ್ಷಿಣ ಗುಜರಾತ್ ನಿಂದ ಮಧ್ಯ ಕೇರಳ ಕರಾವಳಿವರೆಗೆ ಟ್ರಫ್ ಹಾದು ಹೋಗುತ್ತಿದ್ದು, ಇದರ ಪರಿಣಾಮ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಸೇರಿ ಕರಾವಳಿ ಭಾಗದಲ್ಲಿ ಆಗಸ್ಟ್ 31ರವರೆಗೂ ಭಾರಿ ಮಳೆ ಆಗಲಿದೆ. ಗಂಟೆಗೆ 45 ಕಿ.ಮೀ ವರೆಗೆ, ಮತ್ತೆ ಕೆಲವು ಕಡೆ 55ಕಿ.ಮೀ.ವರೆಗೆ ಗಾಳಿಯ ವೇಗ ಇರಲಿದೆ.