ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಪ್ರತಿ ಮನೆಯಲ್ಲೂ ಬಳಕೆಯಲ್ಲಿದ್ದ ಕ್ರೀಂಗಳಲ್ಲೊಂದು ‘ಬೊರೊಲಿನ್’. 1929 ರಲ್ಲಿ ಈ ಕ್ರೀಮ್ ಬಿಡುಗಡೆಯಾದಾಗ ದೇಶವು ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಅಂದಿನಿಂದ ಇಂದಿನವರೆಗೂ ಬೊರೊಲಿನ್ ಪ್ರತಿ ಮನೆಯಲ್ಲೂ ಚಿರಪರಿಚಿತವಾಗಿದೆ. ಬೊರೊಲಿನ್ ‘ಪ್ರಸಿದ್ಧ ಟ್ರೇಡ್‌ಮಾರ್ಕ್’ ಎಂದು ದೆಹಲಿ ಹೈಕೋರ್ಟ್ ಕೂಡ ಘೋಷಿಸಿದೆ. ಮತ್ತೊಂದು ಕಂಪನಿಗೆ ತನ್ನ ಟ್ರೇಡ್ ಡ್ರೆಸ್ ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ. ಆ ಉತ್ಪನ್ನ ಬೊರೊಲಿನ್ ಅನ್ನು ಹೋಲುವಂತಿಲ್ಲ ಎಂಬುದು ನ್ಯಾಯಾಲಯದ ಸೂಚನೆ.
‘ಟ್ರೇಡ್ ಡ್ರೆಸ್’ ಎಂದರೆ ಉತ್ಪನ್ನ ಅಥವಾ ಸೇವೆಯ ರೂಪ ಅಥವಾ ವಿನ್ಯಾಸ. ‘ಬೊರೊಲಿನ್’ ಟ್ರೇಡ್‌ಮಾರ್ಕ್ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ ಎಂದು ಕೋರ್ಟ್ ಹೇಳಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಓಮನ್ ಮತ್ತು ಟರ್ಕಿಯಂತಹ ಇತರ ದೇಶಗಳಲ್ಲಿಯೂ ಜನಪ್ರಿಯತೆ ಗಳಿಸಿದೆ. ಕಂಪನಿಯು ‘ಓವರ್-ದಿ-ಕೌಂಟರ್’ ಆಂಟಿಸೆಪ್ಟಿಕ್ ಕ್ರೀಮ್ ಬೊರೊಲಿನ್‌ನ ಮಾಲೀಕತ್ವ ಮತ್ತು ಮಾರುಕಟ್ಟೆ ಹಕ್ಕುಗಳನ್ನು ಹೊಂದಿದೆ. ‘ಬೋರೋಬ್ಯೂಟಿ’ ಹೆಸರಿನ ಮತ್ತೊಂದು ಉತ್ಪನ್ನ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಲಾಗಿತ್ತು. ಉತ್ಪನ್ನದ ತಯಾರಿಕೆ ಮತ್ತು ಮಾರಾಟದ ವಿರುದ್ಧ ಮೊಕದ್ದಮೆ ಹೂಡಲಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬೋರೋಬ್ಯೂಟಿಯ ಟ್ರೇಡ್ ಡ್ರೆಸ್ ಬದಲಾಯಿಸುವಂತೆ ಸೂಚಿಸಿದೆ.
‘ಬೊರೊಲಿನ್’ ಶುರುವಾಗಿದ್ದು ಹೇಗೆ?
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೋಲ್ಕತ್ತಾದ ಪ್ರಸಿದ್ಧ ಉದ್ಯಮಿ ಗೌರ್ಮೋಹನ್ ದತ್ತಾ ಜಿಡಿ ಫಾರ್ಮಾಸ್ಯುಟಿಕಲ್ಸ್ ಅನ್ನು ಪ್ರಾರಂಭಿಸಿದರು. ದೇಶಕ್ಕೆ ಆಮದು ಮಾಡಿಕೊಳ್ಳುವ ಔಷಧೀಯ ಉತ್ಪನ್ನಗಳ ಗುಣಮಟ್ಟದೊಂದಿಗೆ ಸ್ಪರ್ಧಿಸುವ ಉದ್ದೇಶದಿಂದ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯ್ತು. ಪ್ರತಿಯೊಬ್ಬ ಭಾರತೀಯನ ಚರ್ಮಕ್ಕೆ ಹೊಂದಿಕೆಯಾಗುವ ಉತ್ಪನ್ನವನ್ನು ಸಿದ್ಧಪಡಿಸುವುದು ಕಂಪನಿಯ ಉದ್ದೇಶವಾಗಿತ್ತು. ಹಸಿರು ಟ್ಯೂಬ್‌ನಲ್ಲಿ ಬರುವ ಈ ಕ್ರೀಮ್ ಅನ್ನು ಆಳವಾದ ಗಾಯಗಳು, ಮೊಡವೆ ಮತ್ತು ವಿವಿಧ ರೀತಿಯ ಚರ್ಮದ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ.