alex Certify ಬೀದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ವಿವಿಧೆಡೆ ಹವಾನಿಯಂತ್ರಿತ ‘ಬಜಾರ್’ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ವಿವಿಧೆಡೆ ಹವಾನಿಯಂತ್ರಿತ ‘ಬಜಾರ್’ ನಿರ್ಮಾಣ

ಬೆಂಗಳೂರು: ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಜಯನಗರ ಬಸ್/ಮೆಟ್ರೊ ನಿಲ್ದಾಣದ ಬಳಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ನಿರ್ಮಿಸಿರುವ ಹವಾನಿಯಂತ್ರಿತ ಮಾರುಕಟ್ಟೆ “ಕೃಷ್ಣದೇವರಾಯ ಪಾಲಿಕೆ ಬಜಾರ್” ಅನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸಲಾಗಿದ್ದು, ಇಲ್ಲಿ 79 ಮಳಿಗೆಗಳಿವೆ. ದಕ್ಷಿಣ ಭಾರತದಲ್ಲಿಯೇ ಇಂತಹ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿತವಾಗಿರುವುದು ಇದೇ ಮೊದಲು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಅವರಿಗೆ ಗೌರವ ಸೂಚಿಸುವಂತೆ ಬಜಾರ್ ಅನ್ನು ಕೃಷ್ಣದೇವರಾಯ ಪಾಲಿಕೆ ಬಜಾರ್ ಎಂದು ನಾಮಕರಣ ಮಾಡಲಾಗಿದೆ ಎಂದರು.

ಪಾಲಿಕೆ ಬಜಾರ್ ಸರ್ಕಾರದ ಜನಪರ ಚಿಂತನೆಯ ಯೋಜನೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಂತಹ ಬಜಾರ್ ಗಳು ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ವಿಶೇಷವಾಗಿ ಗಾಂಧಿಬಜಾರ್ ನಂತಹ ಜನನಿಬಿಡ ಪ್ರದೇಶಗಳಲ್ಲಿ ನಿರ್ಮಿಸುವ ಅಗತ್ಯವಿದೆ. ನಾನು ಈ ಹಿಂದೆಯೂ ವಿಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೆ, ಈ ಪ್ರದೇಶ ನನಗೆ ಬಹಳ ಚಿರಪರಿಚಿತವಾಗಿದೆ. ವ್ಯಾಪಾರಿಗಳ ಪರಿಸ್ಥಿತಿಯನ್ನು ಆಗಿನಿಂದಲೇ ಗಮನಿಸಿದ್ದ ನನಗೆ, ಶಾಸಕ ಕೃಷ್ಣಪ್ಪನವರ ಬೇಡಿಕೆ ಸಮಂಜಸವಾಗಿದೆ ಎನ್ನಿಸಿತ್ತು ಎಂದರು.

ವಿಜಯನಗರ ವಿಧಾನಸಭಾಕ್ಷೇತ್ರದಲ್ಲಿ ಕೃಷ್ಣದೇವರಾಯ ಪಾಲಿಕೆ ಬಜಾರ್ ಯೋಜನೆ ಇಲ್ಲಿನ ಶಾಸಕರಾದ ಎಂ.ಕೃಷ್ಣಪ್ಪ ಅವರ ಕನಸು. ಇಲ್ಲಿನ ಬೀದಿವ್ಯಾಪಾರಿಗಳು ಬಿಸಿಲು, ಗಾಳಿ, ಮಳೆಯಲ್ಲಿ ವ್ಯಾಪಾರ ಮಾಡಬೇಕಾಗಿದ್ದು, ಅವರಿಗೆ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡಲು ಬೇಡಿಕೆಯಿರಿಸಿದ್ದರು. ನಾನು 2017 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಾಲಿಕೆ ಬಜಾರ್ ಗಳ ನಿರ್ಮಾಣಕ್ಕೆ 5 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದ್ದೆ, ಇಂದು ನಾನೇ ಈ ಬಜಾರ್ ನ್ನು ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಬೆಂಗಳೂರು ನಗರ ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಬಸ್ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣವಿರುವ ಸೂಕ್ತ ಸ್ಥಳದಲ್ಲಿ ಪಾಲಿಕೆ ಬಜಾರ್ ನಿರ್ಮಾಣವಾಗಿದೆ. ಇದರಿಂದ ಬಹಳ ಜನರಿಗೆ ಅನುಕೂಲವಾಗಲಿದೆ. ಒಂದೇ ಕಡೆ ಎಲ್ಲಾ ವ್ಯಾಪಾರ ಮಾಡುವವರಿಗೆ ವ್ಯವಸ್ಥೆ ಕಲ್ಪಿಸಿದ್ದು, ನಾಗರಿಕರಿಗೆ ಅನುಕೂಲವಾಗಲಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...