ಬೆಂಗಳೂರು: ಸರ್ಕಾರದಿಂದ ನೀಡುವ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಖಾಸಗಿ ಶಾಲೆ ಶಿಕ್ಷಕರನ್ನು ಪರಿಗಣಿಸದೆ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ತಾರತಮ್ಯ ಖಂಡಿಸಿ ಖಾಸಗಿ ಶಾಲೆಗಳಲ್ಲಿ ಸೆಪ್ಟಂಬರ್ 2 ರಿಂದ ಕಪ್ಪು ಪಟ್ಟಿ ಧರಿಸಿ ಪಾಠ ಮಾಡಲಾಗುವುದು ಎಂದು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ತಿಳಿಸಿದೆ.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಖಾಸಗಿ ಶಾಲೆಗಳಿಂದಲೂ ಶಿಕ್ಷಕರ ಕಲ್ಯಾಣ ನಿಧಿಗೆ ಹಣ ಪಡೆಯುವ ಸರ್ಕಾರ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಮಾತ್ರ ಖಾಸಗಿ ಶಾಲೆ ಶಿಕ್ಷಕರನ್ನು ಪರಿಗಣಿಸದೆ ತಾರತಮ್ಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಸೆಪ್ಟೆಂಬರ್ 2ರಿಂದ ಕಪ್ಪು ಪಟ್ಟಿ ಧರಿಸಿ ಪಾಠ ಮಾಡಲು ಸೂಚಿಸಿದ್ದೇವೆ ಎಂದು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಶಾಲೆಯ ಮಾನ್ಯತೆ ನವೀಕರಣ, ಬಡ ಮಕ್ಕಳ ಆರ್.ಟಿ.ಇ. ಮರು ಜಾರಿ, ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತಾಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.