ಬೆಂಗಳೂರು: ಪ್ರಸಕ್ತ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಪದವಿ ಪ್ರವೇಶಕ್ಕೆ ಆನ್ಲೈನ್ ನಲ್ಲಿ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ 26 ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ಇದುವರೆಗೂ ಸೀಟು ಸಿಗದವರು, ಸೀಟು ಸಿಕ್ಕಿಯೂ ಪ್ರವೇಶ ಪಡೆಯದವರು ಅಂತಿಮ ಸುತ್ತಿನಲ್ಲಿ ಸೀಟು ಪಡೆದುಕೊಳ್ಳಬಹುದು. ಆದರೆ, ಕಡ್ಡಾಯವಾಗಿ 2 ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸಿದರು ಮಾತ್ರ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಸೀಟು ಸಿಕ್ಕ ನಂತರ ಈ ಠೇವಣಿ ಮೊತ್ತವನ್ನು ಶುಲ್ಕದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.
ಆಗಸ್ಟ್ 29ರಂದು ಸಂಜೆ 4 ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಆಗಸ್ಟ್ 30 ರಿಂದ 31ರೊಳಗೆ ಶುಲ್ಕ ಪಾವತಿಸಿ, ಸೆಪ್ಟೆಂಬರ್ 2ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.