ಬೆಂಗಳೂರು: ರಾಜ್ಯದಲ್ಲಿ ದುಬಾರಿ ಮದ್ಯದ ದರ ಒಂದೆರಡು ದಿನಗಳಲ್ಲಿ ಅಗ್ಗವಾಗುವ ಸಾಧ್ಯತೆ ಇದೆ. ನೆರೆ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ಕರ್ನಾಟಕದಲ್ಲಿ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಒಂದೆರಡು ದಿನಗಳಲ್ಲಿ ದುಬಾರಿ ಬೆಲೆಯ ಮದ್ಯದ ದರ ಇಳಿಕೆ ಮಾಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದರ ಪರಿಷ್ಕರಣೆ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದರು. ಇದರಿಂದ ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ಕೋಟಿ ರೂ. ಹೆಚ್ಚಿನ ರಾಜಸ್ವ ನಿರೀಕ್ಷಿಸಲಾಗಿತ್ತು.
ನೆರೆ ರಾಜ್ಯಗಳ ದರ ಪರಿಶೀಲಿಸಿದಗ ನಮ್ಮಲ್ಲಿ ದುಬಾರಿ ಬೆಲೆಯ ಮದ್ಯದ ದರ ಹೆಚ್ಚಾಗಿದ್ದು, ಅಗ್ಗದ ದರದ ಮದ್ಯಗಳ ಬೆಲೆ ಕಡಿಮೆ ಇದೆ ಎಂಬುದು ಗೊತ್ತಾಗಿದೆ. ಗಡಿ ಭಾಗದವರು ಬೇರೆ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಾರೆ. ಹೀಗಾಗಿ ದುಬಾರಿ ಬೆಲೆಯ ಮದ್ಯದ ದರ ಕಡಿಮೆ ಮಾಡಬೇಕು. ಕಡಿಮೆ ದರದ ಮದ್ಯಗಳ ಬೆಲೆ ಹೆಚ್ಚಿಸಬೇಕೆಂದು ಹೇಳಲಾಗಿತ್ತು. ಬಡವರು ಹೆಚ್ಚಾಗಿ ಸೇವಿಸುವ ಕಡಿಮೆ ದರದ ಮದ್ಯಗಳು ರಾಜ್ಯದಲ್ಲಿ ಹೆಚ್ಚು ಮಾರಾಟವಾಗುತ್ತವೆ. ಜೂನ್ ಒಂದರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇತ್ತು. ಆದರೆ, ಸಿಎಂ ಒಪ್ಪಿಗೆ ನೀಡದ ಕಾರಣ ಜಾರಿಯಾಗಿರಲಿಲ್ಲ. ಈಗ ದುಬಾರಿ ಮದ್ಯದ ದರ ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.